9/25/14

ಕಳ್ಳಿಗಿಡದ ಹೂ

ಮುಡಿಯೇರದ ಗುಡಿಸೇರದ ಕಳ್ಳಿಗಿಡದ ಹೂ 19 ವರ್ಷಗಳ ನಂತರ ಹೂ ಬಿಡುತ್ತಿದೆ. ಈ ಹೂ ಕಾಣಸಿಗುವುದು ಅಪರೂಪ. ಮುಡಿಪು, ಬಾಳೆಪುಣಿ ಗ್ರಾಮ ಪಂಚಾಯಿತಿ, ಕುಕ್ಕುಕಟ್ಟೆ ಮನೆಯ ಆವರಣದ ಬೇಲಿಯಲ್ಲಿ ಹೂವು ಚೆಲುವೆಲ್ಲಾ ನಂದೆನ್ನುತ್ತಾ ಮೈದುಂಬಿಕೊಂಡು, ಮುಂಜಾವಿನ ಮಂಜಿನಲ್ಲಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಂತಂತ್ತಿದೆ.ಕಳ್ಳಿಗಿಡದ ಹೂ ಬಿಟ್ಟಾಗ ಮೊಸರಿನ ಗಡಿಗೆ ಒಡೆದು ಚೆಲ್ಲಾಪಿಲ್ಲಿಯಾದಂತೆ ಭಾಸವಾಗುತ್ತದೆ. ಎಲೆಯ ಕೆಲಸವನ್ನು ಕಾಂಡವೇ ಮಾಡುವುದು ಕಳ್ಳಿಗಿಡದ ಒಂದು ವಿಶಿಷ್ಟ ಲಕ್ಷಣ. ಈ ಗಿಡವು ಬಹಳ ದಿನಗಳ ಕಾಲ ನೀರನ್ನು ತನ್ನ ಕಾಂಡದಲ್ಲಿಯೇ ಶೇಖರಿಸಿ, ಅದನ್ನು ಪುನಃ ಮರುಬಳಕೆ ಮಾಡುತ್ತದೆ.ಕಳ್ಳಿಗಿಡ ಎಂದರೆ ಮರುಭೂವಿಯಲ್ಲಿ ಬೆಳೆಯುವ ಒಂದು ಬಗೆಯ ಸಸ್ಯ ಇದರಲ್ಲಿ ಹೂಗಳು ಅಪರೂಪಕ್ಕೆ ಮೂಡುತ್ತವೆ. ಇಂಗ್ಲೀಷ್ನಲ್ಲಿ ಕ್ಯಾಕ್ಟಸ್ ಎನ್ನುತಾರೆ. ಕಳ್ಳಿಗಿಡಗಳ ಹೂವುಗಳು ದೊಡ್ಡದಾಗಿ, ಆಕರ್ಷಕವಾಗಿರುತ್ತವೆ. ಆದರೆ ಈ ಹೂ ಕೆಲವೇ ಗಂಟೆಗಳಲ್ಲಿ ಮುದುಡಿ ಬಾಡಿಹೋಗುತ್ತದೆ.  

ಚಂದ್ರಶೇಖರ ಎಂ.ಬಿ ಛಾಯಾಗ್ರಾಹಕ ಎಸ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ


9/23/14

ಅಂತರ್ಜಾಲ ಚಿತ್ರ

ಅಮ್ಮನ ಪ್ರೀತಿ ಮರೆತೆಯಾ

ಗೆಳೆಯಾ, ಅಮ್ಮನ ಕಣ್ಣ ಹಣತೆಯ ಬೆಳಕಿನಲ್ಲಿ ಬೆಳೆದು
ದೊಡ್ದವನಾದವನು ನೀನು ಈಗ...
ಮೋಹದ ಹೆಣ್ಣಿನ ಕಣ್ಣ ನಕ್ಷತ್ರದ ಸೆಳೆತಕ್ಕೆ ಸಿಲುಕಿ
ಅಮ್ಮನಿಗೆ ಬೆನ್ನು ತಿರುಗಿಸುವೆಯಾ!
ಅಮ್ಮನ ತೊಡೆಯಲಿ ಮಲಗಿ ಬೆಚ್ಚಗೆ ಕನಸು ಕಾಣಲು
ಕಲಿತವನು ನೀನು
ರಕ್ತಮಾಂಸಗಳನ್ನು ಅಮ್ಮನಿಂದ ಎರವಲು
ಪಡೆದಿರುವುದನ್ನು ಮರೆತೆಯಾ
ಈಗ ಬೇರೊಂದು ಹೆಣ್ಣಿನ ನುಣುಪು ಕೆನ್ನೆಗಳ
ಮೋಹಕ್ಕೆ ಸಿಕ್ಕಿ
ಅಮ್ಮನ ಸುಕ್ಕುಗೆನ್ನೆಗೆ ಮುತ್ತಿಡುವುದನ್ನು ಮರೆವೆಯಾ!
ಒಂದು ಕಾಲಕ್ಕೆ ನಿನ್ನ ಅಮ್ಮನಿಗೂ ಆ ಹೆಣ್ಣಿನಂತಹ
ಯೌವ್ವನವಿತ್ತು ರಟ್ಟೆಗಳಲ್ಲಿ ಬಲವಿತ್ತು
ನಕ್ಷತ್ರದಂತ ಕಣ್ಣಿತ್ತು ಕಣ್ಣಳಲ್ಲಿ ಕನಸಿತ್ತು
ಸೋತರೂ ಗೆಲ್ಲುವ ವಿನಯವಿತ್ತು
ಅಮ್ಮನು ಸುರಿಸಿದ ಮೈ ಬೆವರಿನಲ್ಲಿ ನಿನ್ನ ಭವಿಷ್ಯವಿತ್ತು
ಈಗ ಅದನ್ನೆಲ್ಲಾ ಮರೆತೂ ಬೇರೊಂದು ಹೆಣ್ಣಿನ
ಸೀರೆ ಸೆರುಗಿನಲ್ಲಿ ಮುಖ ಹುದುಗಿಸಿ
ಅಮ್ಮನನ್ನು ಮುರುಕಲು ಸೂರಿನಡಿ ಕೂರಿಸಿ
ಬದುಕ ಪ್ರೀತಿಸುವ ಕ್ರೂರಿ ನೀನಾಗಬೇಡಾ ಗೆಳೆಯಾ....!!!

ಅರ್ಚನಾ ಎಸ್. ಶೆಟ್ಟಿ 
ಪ್ರಥಮ ಎಂ.ಎ. ಕನ್ನಡ ವಿಭಾಗ

ಅಂತರ್ಜಾಲ ಚಿತ್ರ

ಮನಸ್ಸು

ಭಾವನೆಗಳ ಮೃದು ಮಧುರ ತಾಣ
ಕನಸುಗಳ ಸುಂದರ ಲೋಕ ಮನಸ್ಸು
ಹೂವಿನಂತೆ ಅರಳುವುದು
ಸಂತೋಷದಿ ಬಿರಿಯುತಿರುವುದು
ಹತೋಟಿಯಲ್ಲಿರದೆ ಒಂದೊಮ್ಮೆ ಈ ಮನಸ್ಸು
ಹುಚ್ಚು ಕುದುರೆಯಂತೆ ಓಡುವುದು,
ಈ ಮನಸ್ಸಿಗೆ ಕಡಿವಾಣ ಹಾಕಲಾಗದೆ
ಎಲ್ಲಿಯೋ ಕೈ ಜಾರಿ ಹೋಗುವುದು.
ಮನಸ್ಸೆಂಬ ಕನ್ನಡಿಯು ದುಃಖದ
ತೆರೆಗೆ ಬಡಿದು ಒಡೆದು ಹೋಗಬಾರದು
ಓಡುವ ಮನಸ್ಸನ್ನು ಹಿಡಿವ
ಸಾಹಸದಿ ಅದನ್ನು ಕಳೆದುಕೊಳ್ಳಬಾರದು.
ಮನಸ್ಸು ಬದುಕೆಂಬ ಹಗಲಲ್ಲಿ ದುಡಿದು
ಮೃತ್ಯುವೆಂಬ ಇರುಳಲ್ಲಿ ಅಮರವಾಗುವುದು.
ಆಸೆಯೆಡೆ ಆಕರ್ಷಿಸಲ್ಪಡುವಮನವ
ಹತ್ತಿಕ್ಕಿದರೆ ಜಯ ನಮ್ಮದಾಗುವುದು.

ಚೇತನಾ ಎಚ್. ಆರ್.
ಪ್ರಥಮ ಎಂ.ಎ. ಕನ್ನಡ

ನನ್ನವ್ವ

ಅಂತರ್ಜಾಲ ಚಿತ್ರ
ತಣ್ಣನೆಯ ಗಾಳಿ ಬೀಸುತಲಿ 
ಸಂದೇಶ ಸಾರಲು ಹೊರಟ ಹಕ್ಕಿಗಳು
ಹಾರಾಡುತ್ತಿವೆ ಬಾನಗಲದಲಿ
ಅಂದು ನಗುಮೊಗದ ನನ್ನವ್ವ
ಮಾತಿನ ಸುರಿಮಳೆಯೊಂದಿಗೆ ಕಳಿಸಿದಳು
ನಾನೂ ಹೊರಟೆ ಕಾಲೇಜಿಗೆ ಆನಂದದಿ
ಮಿತ್ರರ ಜೊತೆ ಹರಟುತ್ತಿದ್ದ ಆ ಕ್ಷಣ 
ಕರೆದಿದ್ದರು ನನ್ನ ಆಫೀಸಿಗೆ
ಏನು ಪ್ರಶ್ನಿಸುತ್ತಾರೋ ಎಂಬ ಭಯ
ಮನದಾಳದಲ್ಲಿ ಕಾಡುತ್ತಿತ್ತು ತಣ್ಣಗೆ
ತಿಳಿಯಿತು ನನ್ನವ್ವ ಇನ್ನಿಲ್ಲವೆಂದು
ಹೆಜ್ಜೆಗಳು ತಡವರಿಸಿದವು ಮಾತು ಬರಿದಾಯ್ತು
ಪರಿಸರವೆ ಮೌನವಾಗಿ
ದುಃಖ ಸಂದೇಶ ಗೋಚರಿಸುತ್ತಿತ್ತು..
ಅಮೂಲ್ಯವಾದದ್ದು ಕಳೆದು ಹೋದಂತೆ
ಬಾಡಿತ್ತು ಮನೆಯವರ ಮುಖ
ನನ್ನ ಮನವು ಅದನ್ನೇ ಹಿಂಬಾಲಿಸಿತು
ದಿನಾ ಆಕೆಯ ಕಣ್ಣೋಟ ನಾ ಬರುವ 
ಹಾದಿಯನ್ನೇ ಕಾಯುತ್ತಿತ್ತು.
ನಗುನಗುತಾ ಮಾತಾಡಿಸುತ್ತಿದ್ದ ಅವ್ವ
ಇಂದು ಮೌನವಾಗಿ ಮಲಗಿದ್ದಾಳೆ.
ಹೊತ್ತಾಯಿತು, ಹೊರಟಾಯಿತು ಎಂಬಂತೆ
ಹೋಗಿಯೇ ಬಿಟ್ಟಳು ಆ ದಿನ 
ಈಗಲೂ ಬರುತ್ತಾಳೆಂದು ಅನಿಸುತ್ತಿದೆ 
ನನ್ನ ಮನದಾಳದಲ್ಲಿ
ನನ್ನ ನೆನಪುಗಳ ರಾಶಿಯನ್ನು
ಕೆದಕಿ ನೋಡಿದರೆ..
ಕಾಣುವುದು ಅವ್ವನ ಮುಖದ ಛಾಯೆ,
ನನ್ನ ಹೃದಯಾಳದಲ್ಲಿದ್ದುಕೊಂಡು ನನ್ನವ್ವ
ಅಮಿತ ಸುಖ ನೀಡುವಳು ಎಂದೆಂದೂ

 ಸುಚಿತ್ರ ಕುಮಾರಿ ಪ್ರಥಮ ಎಂ.ಎ.ಕನ್ನಡ
 

 ಪತಾಕೆ

ಇಡೀ ಊರಿಗೆ ಊರೇ ಸ್ವಾತಂತ್ರ್ಯೋತ್ಸವದ ಸಿದ್ಧತೆಯ ಸಂಭ್ರಮದಲ್ಲಿದೆ. ಬೇರೆ ಬೇರೆ ಊರಿಗೆ ಕೆಲಸದ ನಿಮಿತ್ತ ಹೋಗಿದ್ದ ಶಾಲೆಯ ಹಳೆ ವಿದ್ಯಾಥರ್ಿಗಳು ಸ್ವಾತಂತ್ರ್ಯೋತ್ಸವಕ್ಕೆ ಆಗಮಿಸಿದ್ದರು. ಏ.....ಅಬ್ದುಲ್ಲಾ... ಹೇಗಿದ್ದೀಯ? ಏ.....ಆರಾಮ್.....ಕಣೋ ವೆಂಕಟೇಶ, ನೀನು ಹೇಗಿದ್ದೀಯಾ? ಆರಾಮ್.....ಕಣೋ....ಮತ್ತೆ ಬಾಂಬೆ ಹೇಗಾಗ್ತದೆ? ಎಂದು ವೆಂಕಟೇಶ ಮಾತು ಮುಂದುವರಿಸಿದ. ಎಂತದಾ... ಬೆಳಗ್ಗಿನಿಂದ ಸಂಜೆತನಕವು ಕೆಲಸವೇ ಆಗ್ತದೆ, ಪುರುಸೊತ್ತೇ ಇಲ್ಲ ಮಾರಾಯ ಎಂದು ಅಬ್ದುಲ್ಲಾ ಉತ್ತರಿಸಿದ. ಸರಿ ನಾಳೆ ಶಾಲೆಗೆ ಬರ್ತೀಯ ಅಲ್ವ ನಾಡಿದ್ದಿಗೆ ಡೆಕೊರೇಶನ್ ಆಗ್ಲಿಕ್ಕೆ ಉಂಟು ಎಂದ ವೆಂಕಟೇಶನಿಗೆ, ಸರಿ ಬರ್ತೇನೆ ಎಂದು ಅಬ್ದುಲ್ ಪ್ರತ್ಯುತ್ತರಿಸಿದನು.
ತನ್ನ ಮನೆಗೆ ಬಂದ ವೆಂಕಟೇಶ, ಅಮ್ಮ ಅಬ್ದುಲ್ ಬಾಂಬೆಯಿಂದ ಬಂದಿದ್ದಾನೆ ಎಂದ. ಹೌದಾ....ಉಮ್ಮ ಮತ್ತು ಕಾಕಾ ಬಂದಿದಾರ? ಎಂದು ವೆಂಕಮ್ಮ ಪ್ರಶ್ನಿಸಿದಳು. ಇಲ್ಲ, ಗೊತ್ತಿಲ್ಲ ನಾನು ಕೇಳಿಲ್ಲ ಎಂದ ವೆಂಕಟೇಶ. ಕೂಡಲೇ ವೆಂಕಮ್ಮ ಸರಿ, ನಾನು ಹೋಗಿ ಮಾತನಾಡಿ ಬರ್ತೇನೆ ಎಂದು ಹೊರಟು ಹೋದಳು.
 ಇತ್ತ ವೆಂಕಮ್ಮ, ಖತೀಜಾಬಿ ಅವರ ಮನೆಯ ಗೇಟನ್ನು ತೆರೆದು ಒಳಗೆ ಪ್ರವೇಶಿಸುತ್ತಿದ್ದಂತೆ ಬನ್ನಿ ವೆಂಕಮ್ಮ ಹೇಗಿದ್ದೀರಿ? ಎಂದಳು ಖತೀಜಾಬಿ. ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ ಉಮ್ಮ? ಎಂದಳು ವೆಂಕಮ್ಮ. ಚೆನ್ನಾಗಿದ್ದೇನೆ, ಮತ್ತೆ ವಿಶೇಷ ವೆಂಕ್ಟೇಶನಿಗೆ ಮದುವೆ ಮಾಡುವ ಯೋಚನೆ ಉಂಟ? ಹೇಳ್ತಾ ಇದ್ದೇವೆ ಮದುವೆ ಮಾಡ್ಕೊ ಮಾರಾಯ ಅಂತ. ಆದ್ರೆ ಅವನು ಅದರ ಯೋಚನೆಯಲ್ಲೇ ಇಲ್ಲ ಎಂದು ವೆಂಕಮ್ಮ ಉತ್ತರಿಸಿದಳು. ಇವರಿಬ್ಬರ ಮಾತು ಮುಂದುವರಿಯುತ್ತಿದ್ದಂತೆ ಹಸನಬ್ಬ ಬಂದುದನ್ನು ಕಂಡು, ವೆಂಕಮ್ಮ ಹೇಗಿದ್ದೀರಿ ಕಾಕಾ ಎಂದಳು. ಹಾಂ...ಚೆನ್ನಾಗಿದ್ದೇನೆ ಮನೆಯಲೆಲ್ಲಾ ಚೆನ್ನಾಗಿದ್ದಾರ ಎಂದರು ಹಸನಬ್ಬ. ಹಾಂ....ಚೆನ್ನಾಗಿದ್ದಾರೆ ಎಂದಳು ವೆಂಕಮ್ಮ. ಇವರ ಮಾತು ಮುಂದುವರಿಯುತ್ತಿದ್ದಂತೆ, ಸೂರ್ಯ ಪಶ್ಚಿಮಕ್ಕೆ ವಾಲುತ್ತಿರುವುದನ್ನು ಗಮನಿಸಿದ ವೆಂಕಮ್ಮ ಮನೆಗೆ ತೆರಳಿದಳು.








 ಮರುದಿನ, ಮುಂಜಾನೆ ಜನರೆಲ್ಲಾ ಎದ್ದು ತಮ್ಮ ತಮ್ಮ ದೈನಂದಿನ ಕೆಲಸ ಮುಗಿಸಿ ಶಾಲೆಯನ್ನು ಸ್ವಚ್ಛಗೊಳಿಸಲು ಹೊರಟರು. ಊರಿಗೆ ಊರೇ ಬಂದು ಸೇರಿತು. ಎಲ್ಲರೂ ಒಟ್ಟಾಗಿ ಶಾಲೆಯ ವಾತಾವರಣವನ್ನು ಶುಚಿಗೊಳಿಸಿ ಬಳಿಕದಲ್ಲಿ ಕೇಸರಿ, ಹಸಿರು, ಬಿಳಿ, ಪತಾಕೆಗಳನ್ನು ಎತ್ತರ ಎತ್ತರವಾಗಿ ನೆಟ್ಟರು. ಕಟ್ಟಡದ ಒಂದು ಬದಿಯಲ್ಲಿ ಕೇಸರಿ ಬಣ್ಣದ  ಕಾಗದದ ತೋರಣಗಳು ರಾರಾಜಿಸಿದವು. ಇನ್ನೊಂದು ಬದಿಯಲ್ಲಿ ಹಸಿರು ಬಣ್ಣದ ಕಾಗದದ ತೋರಣಗಳು ರಾರಾಜಿಸಿತು. ಮತ್ತೊಂದು ಬದಿಯಲ್ಲಿ ಬಳಿ ಬಣ್ಣದ  ಕಾಗದದ ತೋರಣಗಳು ರಾರಾಜಿಸಿದವು. ಮರುದಿನಕ್ಕೆ ಈ ಎಲ್ಲಾ ಸಿದ್ಧತೆ ನಡೆಸಿ ಮನೆಗೆ ತೆರಳಿದರು. ಹೊತ್ತು ಮುಳುಗಿ ರಾತ್ರಿಯಾಗುತ್ತಿದ್ದಂತೆ ಎಲ್ಲರು ನೆಮ್ಮದಿಯಿಂದ ನಿದ್ರಿಸಿದರು. ಬೀದಿಯಲ್ಲಿದ್ದ ಆಡುಗಳು ಮಾತ್ರ ಕಟ್ಟಿದ್ದ ಕಾಗದದ ತೋರಣಗಳನ್ನು ತಿನ್ನುತ್ತಿದ್ದವು.
ಮರುದಿನ ಎಲ್ಲರ ಮುಖದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಕುಣಿಯುತ್ತಿತ್ತು. ಊರಿಗೆ ಊರೇ ಶಾಲೆಯ ಕಡೆ ಧಾವಿಸಿತು. ಕಾಗದದ ತೋರಣಗಳನ್ನು ಕಟ್ಟಿದ ಹಗ್ಗ ಕಡಿದು ಬಿದ್ದದ್ದನ್ನು ಗಮನಿಸಿದ ಜನರ ಗುಂಪು, ಪಿಸುಪಿಸು ಮಾತನಾಡುತ್ತಾ ತನ್ನಿಂತಾನಾಗಿಯೇ ವಿಭಾಗವಾಯಿತು. ಶಾಲೆಯ ಮುಖ್ಯೋಪಾಧ್ಯಾಯರು ಧ್ವಜವನ್ನು ಕಟ್ಟಿ, ಧ್ವಜ ಸ್ತಂಭದ ತುದಿಗೇರಿಸಿದರು. ಗಣ್ಯರು ಧ್ವಜಾರೋಹಣ ನಡೆಸಿದರು. ಎಲ್ಲರೂ ಧ್ವಜಕ್ಕೆ ಗೌರವ ಸೂಚಿಸುತ್ತಿದ್ದಂತೆ ಗುಂಪುಗಳು ಪರಸ್ಪರ ಕಾದಾಟಕ್ಕೆ ಮುಂದುವರಿದವು. ಜನರಲ್ಲಿದ್ದ ಈ ಕಾದಾಟ ಸಮಯ ಕಳೆಯುತ್ತಿದ್ದಂತೆ ಪತಾಕೆಗಳಿಗೂ ಹರಡಿತು. ಕಾದಾಟ ಮುಂದುವರಿದು ಪತಾಕೆಗಳು, ಕಾಗದದ ತೋರಣಗಳು ನೆಲಕ್ಕುರುಳಿದವು. ನೋಡು ನೋಡುತ್ತಿದ್ದಂತೆ ಜನರೂ ನೆಲಕ್ಕುರುಳಿದರು. ಕ್ಷಣದಲೇ ಇಡೀ ಊರನ್ನೇ ಸ್ಮಶಾನ ಮೌನವು ಆವರಿಸಿತು.
ಆಕಾಶದಲ್ಲಿ ರಣಹದ್ದು, ಕಾಗೆಗಳ ಹಾರಾಟದ ನಡುವೆ ಧ್ವಜಸ್ತಂಭದಲ್ಲಿದ್ದ ತ್ರಿವರ್ಣಧ್ವಜ ತಲೆತಗ್ಗಿಸಿ ನಿಂತೇ... ಇತ್ತು.                                    
ದೀಪಕ್ ಎನ್ ದುರ್ಗ
                                                   ದ್ವಿತೀಯ ಎಂ.ಎ.ಕನ್ನಡ
ಕನ್ನಡ ವಿಭಾಗ.

                     ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್...?



ಅರೆ..!! ಇದೇನಿದು ಅಂತ ತಿಳ್ಕೊಂಡ್ರಾ? ಹೌದ್ರಿ ನಮ್ ಕಥೆನಾ ಯಾರ್ರಿ ಕೇಳ್ತಾರೆ. ಕಾಡಲ್ಲಿ ಆರಾಮಾಗಿ ಇದ್ದ ನನ್ನನ್ನ ತಂದು ಕೆತ್ತಿ ಕೆತ್ತಿ ನೋವು ಮಾಡ್ತಾರಲ್ವಾ ಇದು ಸರಿನಾ? ಎಲ್ಲೋ ಇದ್ದ ನನ್ನನ್ನು ಬಡಗಿ ತಂದು ಚೆನ್ನಾಗಿ ನಯಗೊಳಿಸಿ, ನಟ್-ಬೋಲ್ಟ್ಗಳ ಬಂಧನ ಮಾಡಿ, ಉಸಿರು ಬಿಗಿಯುವಂತೆ ಮಾಡುತ್ತಾನಲ್ವಾ ಇದು ತಪ್ಪಲ್ವಾ?. ಸರಿ, ಇದು ಸಾಕಾಗಲ್ಲಾಂತ ಶಾಲಾ-ಕಾಲೇಜುಗಳಲ್ಲಿ ನನ್ನ ಮೇಲೆ ಕೂರುವುದಲ್ಲದೇ ಬ್ಲೇಡ್-ಪೆನ್ನುಗಳಲ್ಲಿ ಅವರವರ ಇತಿಹಾಸ- ಚರಿತ್ರೆಗಳನ್ನು ಕೆತ್ತುವುದೇ ಅವರಿಗೊಂದು ಬಹು ದೊಡ್ಡ ಹಬ್ಬ. ಅಲ್ಲಾ ನನ್ನ್ ಮೇಲೆ ಈ ರೀತಿ ಕೆತ್ತುವುದರಿಂದ ಅವರಿಗೆ ಅದೇನು ಹಬ್ಬನೋ ನಾ ಕಾಣೆ..
ಈ ರೀತಿ ಕೆತ್ತಿಯೇ ತೀರುತ್ತೇನೆ ಅಂತ ಇದ್ರೆ ಸರಿ ಕೆತ್ಕೊಳ್ಲಿ ಬಿಡಿ. ಎಲ್ಲವನ್ನು ಸಹಿಸ್ಕೋತೇನೆ . ಆದ್ರೆ ಇನ್ನು ಕಷ್ಟದ ವಿಷ್ಯ ಇದೆ ಕೇಳಿ. ನನ್ನ್ ಮೇಲೆ ಗೀಚೋದು ಮಾತ್ರ ಅಲ್ದೇ 2-3 ದಡಿಯಂದಿರು ಬಂದು ಕೂತ್ರೆ ಉಸ್ಸಪ್ಪಾ..!! ನಾ ಸಂಪೂರ್ಣ ಸತ್ತಂಗೆ.

ಎಕ್ಸಾಂ ಟೈಮ್ ಬಂತಂದ್ರೆ ಕೇಳೋದೆ ಬೇಡ. ಮಕ್ಳು ಒಮ್ಮೆ ಪಾಸಾಗ್ಲಿ ಅಂತ ಸಿಕ್ಕ-ಸಿಕ್ಕಲ್ಲಿ ಗೀಚಿದ್ರು ನಾ ಅದ್ನೆಲ್ಲಾ ಸಹಿಸ್ಕೋತೀನಿ. ಮಕ್ಳು ಹುಷಾರಾಗಿದ್ರೆ ಅವ್ರಿಗಿಂತ ಹುಷಾರು ಅವ್ರ ಟೀಚರ್. ಈ ಥರ ಬರ್ದದ್ದನ್ನೆಲ್ಲಾ ಬ್ಲೇಡ್ ತಂದು ಸ್ವತಃ ಅವ್ರೆ ಅದ್ನೆಲ್ಲಾ ಉಜ್ಜುವುದು. ಈ ರೀತಿ ಉಜ್ಜೋವಾಗ ಆಗುವ ನೋವು ಅಷ್ಟಿಷ್ಟಲ್ಲ. ಹಿಂದಿನ ಪೀಳಿಗೆಯವರು ಈ ರೀತಿ ನೋವು ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾಯಿತು. ನನ್ನ ನೋವನ್ನು ಯಾರು ಅರ್ಥ ಮಾಡಿಕೊಳ್ಳುವವರಿಲ್ಲ. ನಿಮ್ಮ ಜೊತೆ ನನ್ನದೊಂದು ಕೋರಿಕೆ, ದಯಮಾಡಿ ನೀವಾದರೂ ನನ್ನ ನೋವನ್ನು ಅರ್ಥ ಮಾಡಿಕೊಳ್ಳಿ. ನನ್ನ ಮೇಲೆ ಪದೆ ಪದೇ ಗೀಚಿ  ನನ್ನನ್ನು ನೋಯಿಸದಿರಿ. ನಿಮ್ಮನ್ನು ಕಾಪಾಡುವ ನನ್ನ ಮೇಲೆ ಸ್ವಲ್ಪನಾದ್ರೂ ಕರುಣೆ ತೋರಿಸಿ ಪ್ಲೀಸ್...
ಇಂತೀ ನಿಮ್ಮ...
ಡೆಸ್ಕ್-ಬೆಂಚ್

ಕೀರ್ತನ.ಬಿ ಪ್ರಥಮ ಎಂ.ಎ ಕನ್ನಡ 


ಮಾತು..!

ಪೃಥಿವ್ಯಾಂ ತ್ರೀಣಿರತ್ನಾನಿ ಜಲಮಾನ್ಯಂ ಸುಭಾಷಿತಂ
ಮೂಢೈ ಪಾಶಾಣ ಖಂಡೇಷು ರತ್ನ ಸಂಜ್ಞಾ
ವಿಧೀಯತೇ
ಭೂಮಿಯ ಮೇಲೆ ಮೂರು ವಸ್ತುಗಳನ್ನು ಶ್ರೇಷ್ಟವೆಂದು ಪರಿಗಣಿಸಲಾಗಿದೆ. ಅವೆಂದರೆ ಅನ್ನ, ನೀರು ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರನ್ನು ಶ್ರೇಷ್ಟ ರತ್ನವೆಂದು ಭಾವಿಸಿದ್ದಾರೆಂದು ಸುಭಾಷಿತವೊಂದು ಹೇಳುತ್ತದೆ.
ಮಾತು ಎನ್ನುವುದು ನಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮ ಮಾತ್ರವಲ್ಲ ವ್ಯಕ್ತಿತ್ವದ ಕೈಗನ್ನಡಿಯೂ ಹೌದು. ಅದು ಮಧುರವಾಗಿರಬೇಕು, ಇನ್ನೊಬ್ಬರನ್ನು ನೋಯಿಸುವಂತಿರಬಾರದು. ಬಸವಣ್ಣ ತನ್ನ ವಚನವೊಂದರಲ್ಲಿ ಹೇಳುವಂತೆ ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತಿರಬೇಕು. ಕಠಿಣವಾದ ನುಡಿಗಳಿಗಿಂತ ಮೃದುವಾದ, ಹಿತವಾದ ನುಡಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಕೆಲವೊಂದು ಒಳ್ಳೆಯ ಮಾತುಗಳು ಇನ್ನೊಬ್ಬರ ಜೀವನವನ್ನೇ ಬದಲಿಸಬಹುದು. ನಾವಾಡುವ ಮಾತು ನಮ್ಮ ಸಂಸ್ಕಾರವನ್ನು ಪ್ರತಿನಿಧಿಸುತ್ತದೆ. ಸರ್ವಜ್ಞ ಕವಿ ಮಾತಿನ ಬಗ್ಗೆ - ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರಿ ಮಾತು ಕಿವಿಯೊಳ್ ಕೂರ್ದಸಿಯ ಬಡಿದಂತೆ ಎನ್ನುತ್ತಾರೆ.
ಮಾತುಗಾರಿಕೆ ಎನ್ನುವುದು ಒಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳುವುದು ತುಂಬಾ ಕಷ್ಟ. ಮಾತನಾಡುವವರು ನಿಜವಾಗಿಯೂ ಜ್ಞಾನವುಳ್ಳವರಾಗಿರಬೇಕು. ಹದವರಿತು, ಸಂದರ್ಭವನ್ನರಿತು ಮಾತನಾಡಬೇಕು. ವ್ಯಾಸಸ್ಮೃತಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ : ನೂರರಲ್ಲಿ ಒಬ್ಬ ಮಾತ್ರ ಶೂರನಾಗುತ್ತಾನೆ. ಸಾವಿರದಲ್ಲಿ ಒಬ್ಬ ಮಾತ್ರ ವಿದ್ವಾಂಸ, ಹತ್ತು ಸಾವಿರದಲ್ಲಿ ಒಬ್ಬ ಮಾತ್ರ ಚತುರ ಮಾತುಗಾರನಾಗಬಲ್ಲ.
ಆದುದರಿಂದ ಮಾತುಗಾರಿಕೆ ಚತುರತೆಯ ಪ್ರದರ್ಶನವೂ ಹೌದು. ಮಾತಿನ ಕೌಶಲ್ಯದಿಂದ ಕುಳಿತಲ್ಲೇ, ನಿಂತಲ್ಲೇ ಜಗವನ್ನು ಆಳಬಹುದು.
ನುಡಿದ ಮಾತಿಂಗೆ ತಡಬಡ ಬಂದಲ್ಲಿ ನುಡಿದ ಭಾಷೆಗೆ ಭಂಗ ನೋಡ, ಹಿಡಿದ ಕುಲಕ್ಕೆ ಹಾನಿ ಬಂದಲ್ಲಿ ಒಡಲವಿರಿಸುವುದೆ ಭಂಗ ನೋಡಯ್ಯ, ಇದು ಕಾರಣ ನಡೆನುಡಿ ಶುದ್ದವಿಲ್ಲದಿದ್ದೆಡೆ ಚಂಡೇಶ್ವರ ಲಿಂಗವಾದರೂ ತಪ್ಪಿನೊಪ್ಪಿಗೊಳ್ ಮಡಿವಾಳಯ್ಯ. ಇದು ವಚನಕಾರ ಚಂದ್ರಯ್ಯನ ನುಡಿ. ಅವರ ಪ್ರಕಾರ ಮಾತು ಪ್ರಿಯವಾಗಿ, ಪ್ರಾಸಂಗಿಕವಾಗಿ, ಮೃದುವಾಗಿ,
ಪ್ರಯೋಜನಕಾರಿಯಾಗಿರಬೇಕು. ಮಾತಿಗೆ ಹೊತ್ತುಗೊತ್ತುಗಳಿರಬೇಕು, ಮನಸ್ಸಲ್ಲಿ ಲಕ್ಷ್ಯ ಮತ್ತು ನಾಲಿಗೆ ಹತೋಟಿಯಲ್ಲಿರಬೇಕು. ಮಾತು ಮಾಣಿಕ್ಯದಂತೆ ಒಮ್ಮೆ ಆಡಿದ ಮಾತು ಮತ್ತೆ ಸಿಗುವುದಿಲ್ಲ. ಆದರೆ ಅವು ನಾಶವಾಗುವುದು ಇಲ್ಲ. ಮಾತು ಮಾತಿಗೆ ಸೇರಿ ಜನಿಸಿದ್ದು ಪ್ರೀತಿ, ಮಾತು ಮಾತಿಗೆ ತಾಗಿ ಹುಟ್ಟಿದ್ದು ಭೀತಿ, ಮಾತು ಅರಿದಾತನಿಗೆ ಮಾನ ಮಯರ್ಾದೆ, ಮಾತನರಿಯದ ಮನಕೆ ನಾನಾ ತಗಾದೆ. ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದು ವಚನ ಮೂಲರ್ೊಕ ಜಯಿಸುವುದು ತಿಳಿಯಾ, ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ, ಮೂರು ಗಳಿಗೆಯ ಬಾಳು ಘಮ ಘಮಿಸುತಿರಲಿ ಎಂದು ಕವಿ ದಿನಕರ ದೇಸಾಯಿಯವರು ಹೇಳುತ್ತಾರೆ.
ಆತ್ಮ ಸಂಸ್ಕಾರದ ಒಂದು ರೂಪವಾದ ಮಾತನಾಡುವ ಕಲೆಯು ಮಗು ಪ್ರಪಂಚಕ್ಕೆ ಬಂದಂದಿನಿಂದಲೂ ತನ್ನ ಜೀವನದ ಕೊನೆಯವರೆಗೂ ಅವಿರತವಾಗಿ ಸಾಗುವ ಒಂದು ಸಚೇತನ ಕ್ರಿಯೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.


ಪವಿತ್ರ ಶೆಟ್ಟಿ
ಪ್ರಥಮ ಎಂ.ಎ. ಕನ್ನಡ
 


ಬೆಳ್ಳಿ ಹಬ್ಬದ ಪೂರ್ವ ತಯಾರಿಯಲ್ಲಿ 



1991ರಲ್ಲಿ ಕೆಲವು ಜನರ ಕನಸಿನ ಕೂಸಾಗಿ ಬಿತ್ತಿಯ ಜನನವಾದಾಗ ಅನೇಕರ ಸಂತೋಷಕ್ಕೆ ಪಾರವೆ ಇರಲಿಲ್ಲ. ಕನ್ನಡ ವಿಭಾಗದ ಆಶ್ರಯದಲ್ಲಿ ಬೆಳೆಯುತ್ತಾ ಬಂದು ಈಗ 23ರ ಹರೆಯದ ನವ ತರುಣವಾಗಿ ಬಿತ್ತಿ ಬೆಳೆದು ನಿಂತಿದೆ. ಇದರ ಬಾಲ್ಯದ ಕಡೆಗೊಮ್ಮೆ ಕಣ್ಣು ಹಾಯಿಸಿದರೆ ಇದನ್ನು ಬೆಳೆಸುವಲ್ಲಿ ಅನೇಕರ ಶ್ರಮವಿರುವುದು ಕಂಡುಬರುತ್ತದೆ. ಮಾಧವ ಪೆರಾಜೆಯವರ ಸಂಪಾದಕತ್ವದಲ್ಲಿ, ಪೊ.ಬಿ.ಎ ವಿವೇಕರೈ ಅವರಮಾರ್ಗದರ್ಶನದಲ್ಲಿ, ಅರವಿಂದ ಮಾಲಗತ್ತಿಯವರ ಗೌರವ ಸಂಪಾದಕತ್ವದೊಂದಿಗೆ ಮುಂದೆ ಸಾಗುತ್ತಾ ಬಂದು ತದನಂತರ ಸುಚಿತ್ರ ಕೊಕ್ಕಡ ಅವರ ಸಂಪಾದಕತ್ವ ಮತ್ತು ಪ್ರೊ.ಸಬಿಹಾ ಭೂಮಿಗೌಡರ ಗೌರವ ಸಂಪಾದಕತ್ವದವರೆಗೆ ಅದೆಷ್ಟೋ ಸಂಪಾದಕರು ತಮ್ಮ ಹೆಜ್ಜೆ ಗುರುತುಗಳನ್ನು ಅಚ್ಚೊತ್ತಿ ಹೋಗಿದ್ದಾರೆ.
ಪ್ರಾರಂಭದ ದಿನಗಳಲ್ಲಿ ಗೋಡೆಯ ಬರಹವಾಗಿ ರೂಪು ತಳೆದ ಬಿತ್ತಿ ಸಾಪ್ತಾಹಿಕವು ತದನಂತರ ಎಲ್ಲಾ ವಿಭಾಗಗಳಿಗೂ ಹರಡಿಕೊಂಡ ಸಾಪ್ತಾಹಿಕ ಪತ್ರಿಕೆಯಾಗಿ ಜೀವ ತುಂಬಿ ವಿಶ್ವವಿದ್ಯಾನಿಲಯದಲ್ಲಿ ಹರಡಿಕೊಂಡಿತು. ಇದೀಗ ಬೆಳ್ಳಿಹಬ್ಬದ ಪೂರ್ವ ತಯಾರಿಯಲ್ಲಿ ಬಂದು ನಿಂತಿದೆ. ಆರಂಭದ ಮನ್ನಣೆ ಇಂದು ಪತ್ರಿಕೆಗಳಿಗೆ ಸಿಗುತ್ತಿಲ್ಲ. ಕಾಲ ಬದಲಾದಂತೆ ಬಿತ್ತಿಗು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಬಿತ್ತಿಯು ಕೇವಲ ಗೋಡೆಯ ಮೇಲಿನ ಪ್ರತಿಯಾಗಿ, ಅಥವಾ ಇನ್ಯಾವುದೋ ನಾಲ್ಕು ಬಿಳಿ ಹಾಳೆಗಳ ನಡುವಿನ ಅಕ್ಷರವಾಗಿ ಉಳಿಯುವುದರಿಂದ ನಾಲ್ಕು ಹೆಜ್ಜೆ ಮುಂದೆ ಹೋಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಧುನಿಕ ವಿದ್ಯಮಾನಕ್ಕೆ ತೆರೆದುಕೊಳ್ಳುವ ಹೊಸ ಸವಾಲನ್ನು ಹೊಂದಿದೆ.
ಬಿತ್ತಿಯ ಸ್ವರೂಪವನ್ನು ಬದಲಾಯಿಸುವ ಪ್ರಯೋಗಕ್ಕೆ  ನಮ್ಮ ಬಿತ್ತಿ ತಂಡ ಪ್ರಯತ್ನಿಸುತ್ತಿದೆ. ಅದರ ಮೊದಲ ಪ್ರಯತ್ನವಾಗಿ ಬಿತ್ತಿಗೆ ಆಧುನಿಕ ಕಾಯಕಲ್ಪವೊಂದನ್ನು ನೀಡುವ ಉದ್ದೇಶದಿಂದ ಬ್ಲಾಗ್ ಒಂದನ್ನು ಆರಂಭಿಸಿ, ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಅದೇ ಸಮಯದಲ್ಲಿ ಓದುಗ ಆಸಕ್ತರ ಅಭಿರುಚಿಗೆ ತಕ್ಕಂತೆ ಬಿತ್ತಿ ಪತ್ರಿಕೆಯ ಸ್ವರೂಪವನ್ನು ಬದಲಾಯಿಸಿ ಹೊರ ತರುತ್ತಿದ್ದೇವೆ . ಬಿತ್ತಿ ಬಳಗದ ಸಂಪಾದಕೀಯ ತಂಡವು ಹೊಸ ಹುರುಪಿನಿಂದ ಕೆಲಸ ನಿರ್ವಹಿಸುತ್ತಿದ್ದು ಆಸಕ್ತ ಸಾಹಿತ್ಯ ಸಹೃದಯರ ಬೆಂಬಲವೂ ನಮಗೆ ದೊರೆಯುತ್ತಿದೆ. ಇದೇ ಬೆಂಬಲ ಮುಂದೆಯೂ ದೊರೆಯಲಿ ಎಂಬ ಆಶಯ ನಮ್ಮದು.
                                             

ಲೋಕೇಶ್ ಕುಕ್ಕುಜೆ
ಸಂಪಾದಕರು 
                                     

ತುಲನೆ

ಬಸ್ಸು ಬರಲು ಇನ್ನೂ ಇಪ್ಪತ್ತು ನಿಮಿಷವಿತ್ತು. ಅಲ್ಲೆ ಕಂಬಕ್ಕೆ ಒರಗಿ ಕರವಸ್ತ್ರದಲ್ಲಿ ಮುಖ ಒರೆಸುತ್ತ ನಿಂತಿದ್ದೆ. ರಪ್ಪನೆ ಪಿಚಕಾರಿಯಿಂದ ಹೊಡೆದಂತೆ ಹೊಗೆಯುಂಡೆಯೊಂದು ಮುಖಕ್ಕೆ ಬಡಿಯಿತು. ಮೂರು ಸಲ ಕೆಮ್ಮಿ ದಡಿಯನನ್ನು ದುರುಗುಟ್ಟಿ ನೋಡಿದೆ. ಆದರೆ ಆತ ಅಘೋರ ತಪಸ್ವಿಯಂತೆ ತೋರು ಬೆರಳಿನಿಂದ ಬಡಿದು ಬೂದಿಯನ್ನು ಕೊಡವಿ ತನ್ನ ಪೂರಕ-ರೇಛಕ ಕ್ರಿಯೆಗಳನ್ನು ಸರಾಗವಾಗಿ ಮುಂದುವರೆಸಿದ. ಪಕ್ಕದಲ್ಲೆ ಭಿಕ್ಷುಕನೋರ್ವ ಮುದುರಿ ಮಲಗಿದ್ದ. ನನ್ನ ನಾಲಿಗೆ ತುಟಿಗೂ ಕೇಳಿಸದಂತೆ ನಾಲ್ಕಾರು ಬೈಗುಳದ ಪದಗಳನ್ನು ಹರಿಸಿ ಸುಮ್ಮನಾಯಿತು. ನಿಂತು ನಿಂತು ಕಾಲು ನೋಯುತ್ತಿದ್ದರಿಂದ ಹಿಂಬದಿಯಲಿದ್ದ ಕಾಂಕ್ರೀಟು ಬೆಂಚಿನಲ್ಲಿ ಕುಳಿತವರನ್ನು ಸ್ವಲ್ಪ ಸರಿಸಿ ಕರವಸ್ತ್ರವನ್ನು ಮೂಗಿಗೆ ಒತ್ತಿ ಹಿಡಿದು ಕುಳಿತೆ. ನಾನು ಸುಮ್ಮನೆ ಕುಳಿತಿದ್ದೆ ಆದರೆ ನನ್ನ ಮನಸ್ಸು ದುಶ್ಶಾಸನ ದ್ರೌಪದಿಯ ಸೀರೆಯನ್ನೆಳೆದಂತೆ ನೆನಪುಗಳನ್ನು ಹಿಡಿದಿಡಿದೆಳೆಯುತಿತ್ತು. ಬಗೆ ಬಗೆಯ ಬಣ್ಣಗಳು ಹಸಿರು,ಕೆಂಪು,ಹಳದಿ,ಕಪ್ಪು ಜೊತೆಗೆ ನೀಲಿ ಬಣ್ಣವೂ ಇತ್ತು.ಇನ್ನೂ ಕೆಲವು ಹೆಸರಿಲ್ಲದ ಕೆಲವು ಹೆಸರು ಗೊತ್ತಿಲ್ಲದ ಬಣ್ಣಗಳು. ಕೆಲವು ಕಡೆ ಬಣ್ಣಗಳು ಮಾಸಿದಂತೆ ಕಂಡು ಬಂತು. ಕೆಲವು ಬಣ್ಣಗಳಂತೂ ಎದೆಗಿರಿಯುವಂತೆ-ಅಣಕಿಸುವಂತೆ ತೋರಿತು. ಆ ಕ್ಷಣ ದುಶ್ಶಾಸನನ ಕೈಯಲ್ಲಿದ್ದ ಸೀರೆ ಬಿಳಿಯುಸಿರಿನ ದಡಿಯ, ಮುದುರಿ ಮಲಗಿದ್ದ ಭಿಕ್ಷುಕ, ದುನರ್ಾತವನ್ನು ಬೀರುತ್ತಿದ್ದ ಕಸದ ತೊಟ್ಟಿಗಿಂತಲೂ ಕೊಳಕಾಗಿ ಕಂಡಿತು. ಸುತ್ತಲಿನ ಪರಿಸರ ಕದಲತೊಡಗಿತು. ಬಸ್ಸಿನ ಹಾನರ್್ ಕೇಳಿ ನೆನಪಿನ ರಾಶಿಯೊಳಗಿನಿಂದ ಹೊರ ಬಂದು ತಿರುಗಿ ನೋಡಿದೆ. ದುಶ್ಶಾಸನ ಬಸವಳಿದು ಕುಳಿತಿದ್ದ. ಸೀರೆಯ ಬಣ್ಣ ಇನ್ನೂ ಮಾಸುತ್ತಿದೆ ಎಂದೆನಿಸಿತು.

ಧೀರಜ್ ಪ್ರಥಮ ಎಂ.ಸಿ.ಜೆ




ಮೌನ

ಓ ಮೌನವೇ ನೀನು ಯಾಕೆ ಹೀಗೆ?
ಮಾತಿಲ್ಲ, ಕತೆಯಿಲ್ಲ...
ಹೂ ಬಿರಿದಂಥ ನಗೆ ಕಾಣಲ್ಲ
ಓ ಮೌನವೇ, ನೀನು ಯಾಕೆ ಹೀಗೆ??
ಅನಂತ ವಿಶ್ವದ ಬೇಸರವೆಲ್ಲ
ನಿನ್ನಲ್ಲಿ ಮೈಗೂಡಿಕೊಂಡು,
ಹೃದಯದಲ್ಲಿ ಕಚಗುಳಿ ಇಡುವ
ಚಿಲಿಪಿಲಿ ಮಾತಿನ ಮೇಲೇಕೆ ಕೋಪಗೊಂಡೆ
ಓ ಮೌನವೇ ನೀನು ಯಾಕೆ ಹೀಗೆ?
ಮೌನ ಮುರಿದರೆ ಮಾತು ಚಿಗುರಿದರೆ
ಹರಡಲಾರದೆ ಸ್ನೇಹದ ಹಸಿರು
ಮಾತು ಈ ಜಗದ ಉಸಿರು
ಬಂಧ ಬಂಧನಗಳೆಲ್ಲವೂ
ಮೌನದೊಳಗಿನ ಮತ್ತು
ಜೀವ ಭಾವಗಳೆಲ್ಲವೂ
ನೀ ಮರೆತ ಮಾತಿನ ಸ್ವತ್ತು
ಸೊಗಸುಗಾರ ಅದು ಮಾತು
ಬರಿ ಬೇಸರವು ಮೌನ
ಏಕಾಂತವೊಂದೆ ಮೌನ
ಉಳಿದೆಲ್ಲವೂ ಮಾತು
ಓ ಮೌನವೇ ನೀನು ಯಾಕೆ ಹೀಗೆ?

ಜಯಂತಿ ,  ದ್ವಿತೀಯ ಎಂ.ಎ.ಕನ್ನಡ
 

ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ಪ್ರೊ.ಕೆ . ಬೈರಪ್ಪ ಭರವಸೆ


ಮಂಗಳಗಂಗೋತ್ರಿ: ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಅಸಕ್ತಿ ಮೂಡಿಸುವ ದೃಷ್ಟಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಸೆಪ್ಟಂಬರ್ 6ರಂದು ವೀರಮಣಿ ತಾಳ ಮದ್ದಳೆ ಕಾರ್ಯಕ್ರಮ ಅಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿವಿಯ ಕುಲಪತಿಗಳಾದ ಸನ್ಮಾನ್ಯ ಪ್ರೊ.ಕೆ.ಬೈರಪ್ಪ  ಅವರು  ಯಕ್ಷಗಾನದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಯುಜಿಸಿಯ ವತಿಯಿಂದ ಯಕ್ಷಗಾನ ತರಬೇತಿಗೆ ಪ್ರೋತ್ಸಾಹ ನೀಡುವಂತೆ ಮಾಡಲಾಗುವುದು ಎಂದು ನುಡಿದರು.
ವೀರಮಣಿ ತಾಳಮದ್ದಳೆಯನ್ನು ಡಾ ಪ್ರಭಾಕರ್ ಜೋಶಿ ತಂಡ ನಿರೂಪಿಸಿತು.
ಯಕ್ಷಗಾನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಚಿನ್ನಪ್ಪ ಗೌಡ, ಕುಲಸಚಿವರಾದ ಯಡಪ್ಪಡಿತಾಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಸ್ತಫ.ಕೆ.ಹಸೈನಾರ್  ಪ್ರಥಮ ಎಂ.ಎ ಕನ್ನಡ

ನನ್ನ ಹೆಸರಿಗಾದ ಹೊಸ ಅರ್ಥ 


ನನ್ನ ಅಜ್ಜಿಮನೆಗೆ ಹೋಗುವಾಗ ನೋಡಿಕೊಂಡು ಹೋಗುತ್ತಿದ್ದ ಶಾಲೆ ಮಡಂತ್ಯಾರಿನ ಸೇಕ್ರೇಡ್ ಹಾರ್ಟ್ ಸ್ಕೂಲ್. ಅಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ನನ್ನ ಊರಿನ ಸ್ಕೂಲಿಗಿಂತ ಇದು ತುಂಬಾ ದೊಡ್ಡ ಸ್ಕೂಲಾದ ಕಾರಣ ನನ್ನ ಆಸೆ ಆಸೆಯಾಗಿಯೇ ಉಳಿಯುತ್ತದೆ ಎಂದು ಅನಿಸಿತ್ತು. ಆದರೆ ನನ್ನ ಆಸೆ ಮನೆಯವರದೂ ಅದ ಕಾರಣ ನಾನು ಆಸೆಯ ಅರಮನೆ ಸ್ಕೂಲ್ಗೆ ಸೇರಿಕೊಂಡೆ. ನನ್ನ
ಸ್ಕೂಲಿನ ಇಬ್ಬರು ಗೆಳತಿಯರ ಜೊತೆಯಲ್ಲಿ ದಿನಲೂ ಬಸ್ಸಿನಲ್ಲಿ ರಶ್ನಲ್ಲಿ ಹೋಗುವಾಗ ಮಜಾ ಅಂದ್ರೆ ಮಜಾ. ಬಸ್ಸಿನಲ್ಲಿ ಎಲ್ಲಿಯೂ ಹಿಡಿದುಕೊಳ್ಳದೆ ಸಾಹಸ ಮಾಡಲು ಹೋಗಿ ರಾಡ್ ತಾಗಿ ಊದಿಕೊಂಡಿದ್ದು ಕ್ಲಾಸಿನಲ್ಲಿ ಕೇಳುವಾಗ ಮಯರ್ಾದೆ ಪ್ರಶ್ನೆ ಎಂದು ಬೇರೆ ಕಾರಣ ಹೇಳುವುದು ಇದು ಬಸ್ಸಿನಲ್ಲಿನ ಮಜಾ.
ಹೊಸ ಹೊಸ ಅಧ್ಯಾಪಕರು. ಪರಿಚಯ ಹೇಳುವ ಭಯ. ಹೀಗೆ ಮುಂದುವರಿಯುತ್ತಾ ಇತ್ತು. ಒಬ್ಬರು ಹೊಸ ಅಧ್ಯಾಪಕಿ ತರಗತಿಗೆ ಬಂದರು . ಪರಿಚಯ ಹೇಳಲು ಆರಂಭವಾಯಿತು. ನನ್ನ ಸರದಿ ಬಂತು. ನಾನಂತೂ ನಿಧಾನವಾಗಿ ಮಾತನಾಡುವ ಅಭ್ಯಾಸವನ್ನು ಹೊಂದಿದವಳಲ್ಲ. ಎದ್ದು ನಿಂತು ನನ್ನ ಹೆಸರು ಕೆ. ರೂಪಾ ಎಂದೆ. ಆದರೆ ಮೇಡಂನ ಕಿವಿಗೆ ನನ್ನ ಸ್ವರ ತಲುಪುವಾಗ ಕೆರ್ಪ ಎಂದು ಕೇಳಿಸಿತು.
ಆದರೆ ಮೇಡಂ ತಿರುಗಿ ಕೇಳಿದರು ಕೆರ್ಪನಾ? ಎಂದು. ಎಲ್ಲರಿಗೂ ನಾನು ಹೇಳಿದ್ದು ಕೆರ್ಪ ಎಂದು ಕೇಳಿದ ಕಾರಣ ನಗುದರಲ್ಲಿ ಮೇಡಂ ತಿರುಗಿ ಕೇಳಿದ್ದು ಕೇಳದ ಕಾರಣ ಹಾ! ಎಂದೆ. ಆಗ ಮೇಡಂ ನಾನು ಕ್ಲಾಸಿನಿಂದ ಹೋಗುತ್ತೇನೆ ಎಂದರು. ನಂತರ ಮೇಡಂ ಹೇಳಿದ್ದು ತಿಳಿಯಿತು. ಅಂದಿನ ತರಗತಿ ನಗುವಿನಲ್ಲಿಯೇ ಆರಂಭವಾಯಿತು.
ಅಂದಿನಿಂದ ಎಲ್ಲಿಯೂ ನನ್ನ ಪರಿಚಯ ಹೇಳುವಾಗ
ಅವಸರದಿಂದ ಹೇಳದೆ ನಿಧಾನವೇ ಪ್ರಧಾನ  ಎಂದು ಭಾವಿಸಿ ಮುಂದುವರಿಸುತ್ತೇನೆ. ಅಂದಿನಿಂದ ಸೇಕ್ರೇಡ್ ಹಾಟರ್್ನಲ್ಲಿ ಕೆರ್ಪಳಾಗಿಯೇ ಎಲ್ಲರಿಗೂ ಪರಿಚಯಸ್ಥಳಾಗಿ ನೆನಪಿನಲ್ಲಿ ಉಳಿದೆ. ಕೆ. ರೂಪಾ ಎಂದು ತಿಳಿಯದಿದ್ದರೂ ಕೆರ್ಪ ಎಂದ ತಕ್ಷಣ ಎಲ್ಲರಲ್ಲಿಯೂ ನೆನಪಾಗಿ ಉಳಿದಿರುವೆ.
 

                                                              ಕೆ. ರೂಪಾ ,ಪ್ರಥಮ ಎಂ.ಎ. ಕನ್ನಡ

ಅನುಭವ


ಜೀವನವು ಅನುಭವದ ಮೂಟೆ
ಭಾರವೆಲ್ಲವೂ ಮನಸ್ಸಿನೊಳಗೆ
ನಗುವೊಂದು ಹೊರಹೊಮ್ಮುವುದು
ಮರುಭೂಮಿಯಲ್ಲಿರುವ ನೀರಿನಂತೆ

ಅನೇಕ ತಿರುವುಗಳು ಈ ಪಯಣದಲ್ಲಿ
ಬಾಲ್ಯ ಯೌವ್ವನ ಮುಪ್ಪುಗಳು
ಅದರಾಚೆಗಿರುವುದು ಸಾವು
ಯಾರು ತಿಳಿಯದ ಪ್ರಪಂಚವು

ಬಾಲ್ಯದಲ್ಲಿ ನಾವೇನೆಂದು ತಿಳಿಯದು
ಆಟ-ಪಾಠಗಳ ಕೂಟಗಳ ಸಮ್ಮಿಲನ
ಮುಗ್ದ ಮನಸ್ಸು ಭೇದ ಭಾವವಿಲ್ಲದೆ
ಎಲ್ಲರ ಜೊತೆಗೂಡಿ ಇರುವೆವು

ನಂತರ ಬರುವ ಯೌವ್ವನವು
ಅದು ಗೊಂದಲದ ಗೂಡಾಗಿಹುದು
ಮನಸ್ಸು ಜಾರಿದರೆ ಆಯಿತು,
ಜೀವನದ ಕನ್ನಡಿ ಚೂರು-ಚೂರು

ಈ ಜೀವನದಲ್ಲಿ ಬಂದೆ ಗೆಳತಿ ನೀನು
ನಿನ್ನಿಂದ ಕಲಿತೆ ನಾನು ಬದುಕಿನ ಅರ್ಥವ
ನೈಜ ಅನುಭವವು ನಿನ್ನದು....
ಅದ ಕೇಳುವ ಕಿವಿಗಳು ನಮ್ಮದು

ನಂತರ ಮುಪ್ಪಿನ ಕಾಲವು,
ಮಕ್ಕಳಾಟ ಯೌವ್ವನದ ಸವಿನೆನಪು...
ಮೆಲುಕುಹಾಕುವ ಸುವರ್ಣ ವೇದಿಕೆ..
ಕೊನೆಗೆ ಜೀವನ ಹೆಸರಿಲ್ಲದ ಅಂತ್ಯ.

ಪ್ರಭಾಶ್ರೀ ,ದ್ವಿತೀಯ ಎಂ.ಎಸ್ಸಿ.
ರಾಸಾಯನ ಶಾಸ್ತ್ರ





ಚುಟುಕುಗಳು


ನಾರಿ
ಮನಸೋತೆ ಆ ನಾರಿಗೆ
ಅವಳು ಬರಲಿಲ್ಲ ನನ್ನ ದಾರಿಗೆ
ನಾನು ಹೋದೆ ಬಾರಿಗೆ.

ಆಶೀರ್ವಾದ
ದಿನಾ ನನ್ನ ಹೆಂಡತಿ
ಬೇಡುತ್ತಾಳೆ ನನ್ನ
ಆಶೀರ್ವಾದ
ಮುಂದಿನ ಜನ್ಮದಲ್ಲಾದರೂ ಒಳ್ಳೆಗಂಡ
ಸಿಗಲಿ ಎಂಬುವುದೇ ಅವಳ ಪರಮಪದ.

ರಾಜಕಾರಣಿ
ತಾನು ತನ್ನ ಪತ್ನಿಗೆ
ಹೆದರುವುದಿಲ್ಲವೆಂದಿದ್ದ ರಾಜಕಾರಣಿ
ಹೀಗೆ ಹೇಳಬೇಕೆಂದು ಆದೇಶಿಸಿದ್ದು ಆತನ ಗೃಹಿಣಿ.

ವರದಕ್ಷಿಣೆ
ನನ್ನ ಪತ್ನಿ ನನ್ನ ಪಾಲಿಗೆ
ಸುಂದರಿ, ಸುಗುಣೆ, ಸುಲಕ್ಷಣೆ
ಏಕೆಂದರೆ, ಮದುವೆಯ ಸಮಯದಲ್ಲಿ
ಅವಳಪ್ಪ ಕೊಟ್ಟಿದ್ದಾನೆ 5 ಲಕ್ಷ ವರದಕ್ಷಿಣೆ

ಹೆದರಿಕೆ
ನೀವೆಲ್ಲ ಹೆದರುತ್ತೀರಲ್ಲ ಹೆಂಡತಿಗೆ
ನಾನು ಹೆದರುವುದೇ ಇಲ್ಲ
ಏಕೆಂದರೆ, ನನಗೆ ಹೆಂಡತಿಯೇ ಇಲ್ಲ...


ವಿಶ್ವನಾಥ್ . ಎನ್.
ಪ್ರಥಮ ಎಂ.ಎ.ಕನ್ನಡ 

ಜೀವನ ರೂಪಿಸುವಲ್ಲಿ ತಾಯಿ ಪಾತ್ರ



ಮಕ್ಕಳ ಜೀವನವನ್ನು ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವವಾದುದು. ಮಗುವಿಗೆ ಜನ್ಮ ಕೊಟ್ಟ ತಂದೆ - ತಾಯಿ ಮಕ್ಕಳ ಶ್ರೇಯಸ್ಸಿಗಾಗಿ ಹಗಲು ರಾತ್ರಿಯೆನ್ನದೆ ದುಡಿಯುತ್ತಾರೆ. ತಾಯಿಯಂತು ಕರುಳ ಬಳ್ಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾಳೆ.
ತಾಯಿ ತನ್ನ ಅಸೆ - ಆಕಾಂಕ್ಷೆಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯದ ಕಡೆಗೆ ಗಮನ ಕೊಡುತ್ತಾಳೆ. ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಮಕ್ಕಳಿಗೆ ತಾಯಿ  ಮಾತ್ರ ಏನೂ ಕೊರತೆ ಆಗದಿರುವ ಹಾಗೆ ಅವರ ಇಷ್ಟದಂತೆ ನೋಡಿಕೊಳ್ಳುತ್ತಾಳೆ.
ಏಕೆಂದರೆ ಮಕ್ಕಳು ಯೋಚಿಸಿ ಜೀವನವನ್ನು ಹಾಳು ಮಾಡಿ ಕೊಳ್ಳಬಾರದೆಂಬ ಕಾರಣದಿಂದಾಗಿ. ಮಕ್ಕಳಿಗೆ ಒಂದು ನೆಲೆಯನ್ನು ರೂಪಿಸಿಕೊಡುತ್ತಾಳೆ ತಾಯಿ.ಆದರೆ ಮಕ್ಕಳು ತಾಯಿಯ ಬಳಿ ಕೇಳುವುದು ನೀನು ಏನು ಮಾಡಿದ್ದೀಯ ನಮಗೆ, ನಿನ್ನ ಮಕ್ಕಳಾಗಿ ಹುಟ್ಟಿದ್ದೇ ತಪ್ಪಾಯಿತು ಎಂಬ ಮಾತನ್ನು ಹೇಳಿ ತಾಯಿಯನ್ನು ನಿಂದಿಸುತ್ತಾರೆ.  ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಎನ್ನುವ ಹಾಗೆ ಮಕ್ಕಳು ಏನೇ ಹೇಳಿದರು ತಾಯಿ ಅವರನ್ನು ಪ್ರೀತಿಯಿಂದಲೇ ಕಾಣುತ್ತಾಳೆ,ಅದರಿಂದಲೇ ಕ್ಷಮಯಾಧರಿತ್ರಿ ಎನ್ನುವುದು.

ಅಂತರ್ಜಾಲ ಚಿತ್ರ

ತಾಯಿ ಕಷ್ಟ - ಪಟ್ಟು ದುಡಿಯುವುದು ಮಕ್ಕಳಿಗಾಗಿಯೆ, ತಾನು ಊಟ ಮಾಡದೆ ಇರುತ್ತಾಳೆ ಆದರೆ ಮಕ್ಕಳನ್ನು ಉಪವಾಸ ಕೆಡುವುದಿಲ್ಲ. ಎಲ್ಲರಂತೆ ತಮ್ಮ ಮಕ್ಕಳು ವಿದ್ಯೆಯನ್ನು ಪಡೆಯಬೇಕು ಎಂದು ತಾಯಿ ಆಸೆ ಪಡುತ್ತಾಳೆ, ಒಂದು ನೆಲೆ ಎಂಬುದು ಸಿಗುವವರೆಗೂ ಹೋರಾಡುತ್ತಾಳೆ. ಆದರೆ ಮಕ್ಕಳು ಅವರಿಗೆ ನೆಲೆ ಎಂಬುದು ಆದ ನಂತರ ಹೆತ್ತ ತಾಯಿಯನ್ನೇ ಮರೆಯುತ್ತಾರೆ. ಇದೇ ಕಾರಣದಿಂದ ಹೇಳುವುದು ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದೆ ಹೊರತು ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ .ಅಮ್ಮನ ಪ್ರೀತಿಯೆಂಬ ಗಾಳಕ್ಕೆ ನಾವು - ನೀವು ಎಲ್ಲರೂ ಕೂಡ ಸಿಕ್ಕಿಬಿದ್ದಿದ್ದೇವೆ. ತಾಯಿಯ ವಾತ್ಸಲ್ಯ ಯಾರೂ ನೀಡಲು ಸಾಧ್ಯವಿಲ್ಲ. ಭೂಮಿಯ ಮೇಲಿರುವ ದೇವರು ತಾಯಿ. ತಾಯಿಯನ್ನು ಪೂಜಿಸಿ, ಗೌರವಿಸಿ . ನಮಗೆ ಜನ್ಮ ನೀಡಿದ ತಾಯಿಗೆ ಇಷ್ಟು ಮಾಡಲು ಆಗುವುದಿಲ್ಲವೆ. ತಾಯಿಯನ್ನು ಕಡೆಯ ಕಾಲದವರೆಗೂ ಕಾಪಾಡಿ.
ಸೌಜನ್ಯ
ದ್ವಿತೀಯ ಎಂ.ಎ.
ಕನ್ನಡ ವಿಭಾಗ.

ಪೂರ್ಣಚಂದ್ರ ತೇಜಸ್ವಿ
ಅಂತರ್ಜಾಲ ಚಿತ್ರ 

ಮತ್ತೆ ಮತ್ತೆ ತೇಜಸ್ವಿ ನೆನಪು


ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪರಮೇಶ್ವರ್ ಭಟ್ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಸೆಪ್ಟಂಬರ್ 12 ರಂದು ಮತ್ತೆ-ಮತ್ತೆ ತೇಜಸ್ವಿ ಎಂಬ ಎರಡುವರೆ ಗಂಟೆಗಳ ಸಾಕ್ಷ್ಯಚಿತ್ರ     ಪ್ರದರ್ಶಿಸಲಾಯಿತು.
ಕನ್ನಡದ ಖ್ಯಾತ ಸಾಹಿತಿ, ಚಿಂತಕ, ವಿಮರ್ಶಕ, ಛಾಯಾಚಿತ್ರಗಾರ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಈ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸಬಿಹಾ ಭೂಮಿಗೌಡರವರು ವಹಿಸಿದ್ದರು . ಮುಖ್ಯ ಅತಿಥಿಯಾಗಿ ಸಾಕ್ಷ್ಯ ಚಿತ್ರದ ನಿದರ್ೇಶಕರಾದ ಕೆ.ಪರಮೇಶ್ವರ್ ಆಗಮಿಸಿ ಸ್ನಾತಕೋತ್ತರ ವಿದ್ಯಾರ್ಥಿ
ಗಳೊಂದಿಗೆ ಸಂವಾದ ನಡೆಸಿದರು.
ಕನ್ನಡ ವಿಭಾಗದ ವಿದ್ಯಾರ್ಥಿನಿ
ಶೃತಿ ಅಮಿನ್ ಕಾರ್ಯಕ್ರಮವನ್ನು ನಿರೂಪಿಸಿ ,ಲೋಕೇಶ್ ಕುಕ್ಕುಜೆ ಸ್ವಾಗತಿಸಿ, ವಂದಿಸಿದರು 


ಮುಸ್ತಫ.ಕೆ. ಹಸೈನಾರ್
 ಪ್ರಥಮ ಎಂ.ಎ ಕನ್ನಡ                 


                                 

ಆ ಮೂರ್ತಿಯನ್ನೊಮ್ಮೆ  ನೆನಪಿಸಿದಾಗ

ಯು.ಆರ್. ಅನಂತಮೂರ್ತಿ
ಅಂತರ್ಜಾಲ ಚಿತ್ರ

ಓದುಗ ಸಮುದಾಯಕ್ಕೆ ಪ್ರಶ್ನೆಗಳನ್ನು ಮೂಡಿಸಿದ್ದ, ಹುಟ್ಟುಹಾಕಿದ್ದ ಕೀರ್ತಿ ಬಹುವಾಗಿ  ನವ್ಯದ ಕಾಲಘಟ್ಟದ ಬರಹಗಾರರಿಗೆ ಸಲ್ಲಬೇಕು. ಓದುಗರ ತಿಳುವಳಿಕೆಯನ್ನು ಒರೆಗೆ ಹಚ್ಚುವ ಕೆಲಸ ನವ್ಯ ಸಾಹಿತಿಗಳಿಂದ ನಡೆಯಿತು. ಸಾಹಿತ್ಯದ ಮೂಲ ರೂಪವಾಗಿ ಪ್ರಜ್ಞಾವಂತ ಓದುಗ ವರ್ಗವನ್ನು ರೂಪಿಸಿ ಬೆಳೆಸಿಕೊಂಡು ಬಂದಿರುವುದೇ   ನವ್ಯದ ನಾಯಕರ ಕಾಲದಲ್ಲಿ ಎಂದು ಹೇಳಬಹುದು. ಇಂಥ ಒಂದು ಓದುಗ ಅಭಿಮಾನಿಗಳ ವರ್ಗವನ್ನು ಹುಟ್ಟುಹಾಕಿ ಬೆಳೆಸುತ್ತಾ ಬಂದವರಲ್ಲಿ ಯು.ಆರ್. ಅನಂತಮೂರ್ತಿ  ಅವರು ಸಹ ಒಬ್ಬರು.
ಸಂಸ್ಕಾರ ,ಭಾರತೀಪುರ, ಘಟಶ್ರಾದ್ದ, ದಿವ್ಯ, ಭವ, ದಂತಹ ಕೃತಿಗಳ ಮೂಲಕ ಅದೆಷ್ಟು ತತ್ವ ವಿಚಾರಗಳನ್ನು ಬರೆಯುತ್ತಾ ಬಂದು ಬರಹದುದ್ದಕ್ಕೂ ವಿಮರ್ಶೆಯನ್ನು ಹುಟ್ಟು ಹಾಕುತ್ತಾ ಪ್ರಶ್ನೆಗಳನ್ನು ಮೂಡಿಸಿ ಓದುಗರಲ್ಲಿ ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದು ಬಿಡುವುದು ಅವರ ಬರಹದ ವಿಶೇಷ. ಇಂಗ್ಲೀಷ್ ಶಿಕ್ಷಣದ ಪ್ರಭಾವ, ತನ್ನ ಜಾತಿಯ ಕೆಲವು ಕುರುಡು ಆಚರಣೆಗಳು ಇವುಗಳ ಒಂದಕ್ಕೊಂದು ತಾಕಲಾಟಗಳ ಘರ್ಷಣೆಯ ಉರಿಯನ್ನು ತನ್ನ ಬರಹದುದ್ದಕ್ಕೂ ಮೂಡಿಸಿಕೊಂಡು ಹೋಗುವುದು, ಇವರು ಓದುಗನನ್ನು ಹಿಡಿದಿಟ್ಟುಕೊಳ್ಳುವ ಒಂದು ತಂತ್ರವು ಹೌದು.
ತನ್ನ ಜೀವನದ ಉದ್ದಕ್ಕೂ ಭಾರೀ ಚರ್ಚೆಗಳನ್ನು ಹುಟ್ಟು ಹಾಕಿದವರಲ್ಲಿ ಅನಂತಮೂರ್ತಿಯವರನ್ನು ಬಿಟ್ಟರೆ ಕನ್ನಡ ಸಾಹಿತಿಗಳಲ್ಲಿ ಇನ್ನೊಬ್ಬ ಸಿಗಲಾರರು. ತಮ್ಮ ಬರಹ, ಮಾತುಗಾರಿಕೆಯ ಕಲೆಯಿಂದ ಎಂಥವರನ್ನೂ ಮೋಡಿಗೋಳಿಸತ್ತಿದ್ದ ಅ ವಾಗ್ಮಿಗೆ ವಿರೋಧಗಳು ಕಡಿಮೆಯಿರಲಿಲ್ಲ.
ಅನಂತಮೂರ್ತಿಯವರಂತಹ ಸಾಹಿತಿಯೊಬ್ಬ ರಾಜಕಾರಣಿಯನ್ನು ಖಂಡಿಸಿ ನೀಡಿದ ಹೇಳಿಕೆಗಳು ಅತಿಶಯೋಕ್ತಿ ಎನಿಸಿದರೂ ಪ್ರಜಾಪ್ರಭುತ್ವ ದೇಶದಲ್ಲಿ ಅದು ತಪ್ಪೆಂದು ಕಾಣಿಸಲಾರದು.
 ಪ್ರತಿಯೊಂದನ್ನು ವೈಚಾರಿಕ ನೆಲೆಗಟ್ಟಲ್ಲಿ ವಿಮರ್ಶಿಸುವ ಅನಂತಮೂರ್ತಿಯವರು ತಮ್ಮ ಸಾವಿನಲ್ಲೂ ಸುದ್ದಿಯಾದರು. ವಿವಾದದ ಅಲೆಗಳನ್ನು ಹುಟ್ಟಿಹಾಕಿದರು. ದೇವರು, ನಂಬಿಕೆ, ಧರ್ಮ ಇವುಗಳ ಸಾಚಾತನದ ಬಗ್ಗೆ ಪ್ರಶ್ನೆಯನ್ನು ಮೂಡಿಸಿದರು. ಯಾವ ಕ್ರಿಯಾ ವಿಧಿಗಳನ್ನು ತಮ್ಮ ಬರಹದ ಮೂಲಕ ಅಲ್ಲಗಳೆದರೋ, ಯಾವ ಮಂತ್ರ ಘೋಷಗಳನ್ನು ತರ್ಕಿಸಿದರೊ ಕೊನೆಗೆ ಅದೆ ಮಂತ್ರ ಘೋಷಗಳ ಸದ್ದಿನಲ್ಲಿ ಅವರು ಲೀನವಾಗಿ ಹೋದದ್ದು ಒಂದು ವಿಪರ್ಯಸವಾಗಿ ನಮ್ಮನ್ನು ಕಾಡುತ್ತಿರುವುದು ಮಾತ್ರ ಸತ್ಯ.


ಲೋಕೇಶ್ ಕುಕ್ಕುಜೆ
ಸಂಪಾದಕರು 
ದ್ವಿತೀಯ ಎಂ.ಎ ಕನ್ನಡ                                                                        


9/1/14



ಮಂಗಳೂರು ವಿಶ್ವವಿದ್ಯಾನಿಲಯದ  ವಿದ್ಯಾರ್ಥಿಗಳಿಂದ ಗಣೇಶ ಮೂರ್ತಿಯ ವಿಸರ್ಜನೆಗೂ ಮುನ್ನ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ಕ್ಷಣ.

ಚಿತ್ರ ಬರಹ-ಚಂದ್ರಶೇಖರ.ಎಂ.ಬಿ









ಬಿತ್ತಿ ಬಳಗದಿಂದ 21-01-1991--28-01-1991 ರಲ್ಲಿ ದೇ.ಜವರೇಗೌಡರೊಂದಿಗೆ ನಡೆದ ಸಂದರ್ಶನದ ಒಂದು ಕ್ಷಣ

          ಬಿತ್ತಿ 1991 ರ ಉದ್ಘಾಟನೆಯ ಸಂದರ್ಭ ಉದ್ಘಾಟಕರ                                         ಹಸ್ತಾಕ್ಷರ









ಬಿತ್ತಿಯ ಮೊದಲ ಗೌರವ ಸಂಪಾದಕರಾದ ಖ್ಯಾತ ಸಾಹಿತಿ  ಶ್ರೀ ವಿವೇಕ್ ರೈ ರವರ ಮಾತು






ಬಿತ್ತಿಯ ಮೊದಲ  ಸಂಪಾದಕರಾದ ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿರವರ  ಮಾತು







ಬಿತ್ತಿ ಸಾಪ್ತಾಹಿಕದ ಮೂದಲ ವಾರ್ಷಿಕ ಮಹಾ ಸಂಚಿಕೆ  ಚಿತ್ರ

  ಬಿತ್ತಿ ವಿಶೇಷಾಂಕ 2017