9/23/14

ತುಲನೆ

ಬಸ್ಸು ಬರಲು ಇನ್ನೂ ಇಪ್ಪತ್ತು ನಿಮಿಷವಿತ್ತು. ಅಲ್ಲೆ ಕಂಬಕ್ಕೆ ಒರಗಿ ಕರವಸ್ತ್ರದಲ್ಲಿ ಮುಖ ಒರೆಸುತ್ತ ನಿಂತಿದ್ದೆ. ರಪ್ಪನೆ ಪಿಚಕಾರಿಯಿಂದ ಹೊಡೆದಂತೆ ಹೊಗೆಯುಂಡೆಯೊಂದು ಮುಖಕ್ಕೆ ಬಡಿಯಿತು. ಮೂರು ಸಲ ಕೆಮ್ಮಿ ದಡಿಯನನ್ನು ದುರುಗುಟ್ಟಿ ನೋಡಿದೆ. ಆದರೆ ಆತ ಅಘೋರ ತಪಸ್ವಿಯಂತೆ ತೋರು ಬೆರಳಿನಿಂದ ಬಡಿದು ಬೂದಿಯನ್ನು ಕೊಡವಿ ತನ್ನ ಪೂರಕ-ರೇಛಕ ಕ್ರಿಯೆಗಳನ್ನು ಸರಾಗವಾಗಿ ಮುಂದುವರೆಸಿದ. ಪಕ್ಕದಲ್ಲೆ ಭಿಕ್ಷುಕನೋರ್ವ ಮುದುರಿ ಮಲಗಿದ್ದ. ನನ್ನ ನಾಲಿಗೆ ತುಟಿಗೂ ಕೇಳಿಸದಂತೆ ನಾಲ್ಕಾರು ಬೈಗುಳದ ಪದಗಳನ್ನು ಹರಿಸಿ ಸುಮ್ಮನಾಯಿತು. ನಿಂತು ನಿಂತು ಕಾಲು ನೋಯುತ್ತಿದ್ದರಿಂದ ಹಿಂಬದಿಯಲಿದ್ದ ಕಾಂಕ್ರೀಟು ಬೆಂಚಿನಲ್ಲಿ ಕುಳಿತವರನ್ನು ಸ್ವಲ್ಪ ಸರಿಸಿ ಕರವಸ್ತ್ರವನ್ನು ಮೂಗಿಗೆ ಒತ್ತಿ ಹಿಡಿದು ಕುಳಿತೆ. ನಾನು ಸುಮ್ಮನೆ ಕುಳಿತಿದ್ದೆ ಆದರೆ ನನ್ನ ಮನಸ್ಸು ದುಶ್ಶಾಸನ ದ್ರೌಪದಿಯ ಸೀರೆಯನ್ನೆಳೆದಂತೆ ನೆನಪುಗಳನ್ನು ಹಿಡಿದಿಡಿದೆಳೆಯುತಿತ್ತು. ಬಗೆ ಬಗೆಯ ಬಣ್ಣಗಳು ಹಸಿರು,ಕೆಂಪು,ಹಳದಿ,ಕಪ್ಪು ಜೊತೆಗೆ ನೀಲಿ ಬಣ್ಣವೂ ಇತ್ತು.ಇನ್ನೂ ಕೆಲವು ಹೆಸರಿಲ್ಲದ ಕೆಲವು ಹೆಸರು ಗೊತ್ತಿಲ್ಲದ ಬಣ್ಣಗಳು. ಕೆಲವು ಕಡೆ ಬಣ್ಣಗಳು ಮಾಸಿದಂತೆ ಕಂಡು ಬಂತು. ಕೆಲವು ಬಣ್ಣಗಳಂತೂ ಎದೆಗಿರಿಯುವಂತೆ-ಅಣಕಿಸುವಂತೆ ತೋರಿತು. ಆ ಕ್ಷಣ ದುಶ್ಶಾಸನನ ಕೈಯಲ್ಲಿದ್ದ ಸೀರೆ ಬಿಳಿಯುಸಿರಿನ ದಡಿಯ, ಮುದುರಿ ಮಲಗಿದ್ದ ಭಿಕ್ಷುಕ, ದುನರ್ಾತವನ್ನು ಬೀರುತ್ತಿದ್ದ ಕಸದ ತೊಟ್ಟಿಗಿಂತಲೂ ಕೊಳಕಾಗಿ ಕಂಡಿತು. ಸುತ್ತಲಿನ ಪರಿಸರ ಕದಲತೊಡಗಿತು. ಬಸ್ಸಿನ ಹಾನರ್್ ಕೇಳಿ ನೆನಪಿನ ರಾಶಿಯೊಳಗಿನಿಂದ ಹೊರ ಬಂದು ತಿರುಗಿ ನೋಡಿದೆ. ದುಶ್ಶಾಸನ ಬಸವಳಿದು ಕುಳಿತಿದ್ದ. ಸೀರೆಯ ಬಣ್ಣ ಇನ್ನೂ ಮಾಸುತ್ತಿದೆ ಎಂದೆನಿಸಿತು.

ಧೀರಜ್ ಪ್ರಥಮ ಎಂ.ಸಿ.ಜೆ




No comments:

Post a Comment

  ಬಿತ್ತಿ ವಿಶೇಷಾಂಕ 2017