1/21/15

ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ
'ಕೂಡಿ ಬಾಳಿದರೆ ಸ್ವರ್ಗ ಸುಖ' ಎಂಬ ಸುಂದರವಾದ, ಅರ್ಥವತ್ತಾದ ಗಾದೆ ಮಾತೊಂದಿದೆ. ಈ ಗಾದೆಯನ್ನು ಇಲ್ಲಿ ಉಲ್ಲೇಖಿಸಲು ಕಾರಣವೇನೆಂದರೆ, ಒಂದು ಕಾಲವಿತ್ತು ಅದೇನು ಭಾರಿ ಹಿಂದಿನ ಕಾಲವಲ್ಲ ಕೆಲವೇ ದಶಕಗಳ ಹಿಂದೆ. ಆ ಕಾಲದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬ ಪದ್ದತಿ ವ್ಯವಸ್ತೆಯಲ್ಲಿತ್ತು. ಈ ಕುಟುಂಬ ವ್ಯವಸ್ಥೆಯಲ್ಲಿಹಿರಿಯರಿಂದ ಕಿರಿಯರವರೆಗೆ ಒಟ್ಟಾಗಿ ಜೀವನ ನಡೆಸುತ್ತಿದ್ದರು. ಅ ಕುಟುಂಬ ಬಹಳ ಚೆನ್ನಾಗಿರುತ್ತಿತ್ತು. ಅಲ್ಲಿ ಹಿರಿಯ ಮುಖಂಡನ ಮಾತಿಗೆ ಬೆಲೆಯಿತ್ತು. ಆಚಾರ-ವಿಚಾರ, ರೂಢಿ-ಸಂಪ್ರದಾಯ, ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ಕುಟುಂಬದ ಎಲ್ಲರೂ ಜೊತೆಯಾಗಿ ಸುಖ-ಸಂತೋಷಗಳಿಂದ ಬದುಕಿ ಬಾಳುತ್ತಿದ್ದರು.
ಆಗಿನ ಕಾಲದ ಮಕ್ಕಳು ಆಟವಾಡುತ್ತಾ, ಕೂಟಕೂಡುತ್ತಾ, ಬೀಳುತ್ತಾ-ಏಳುತ್ತಾ ಯಾವುದೇ ನೋವಾದರೂ ಲೆಕ್ಕಿಸದೆ, ಶಾಲೆಯಲ್ಲಿ ಶಿಕ್ಷರಿಂದ ಬೈಗುಳ, ಪೆಟ್ಟು ತಿನ್ನುತ್ತಾ ದೃಢಕಾಯರಾಗಿ, ದೃಢಮನಸ್ಸಿನವರಾಗಿ ಚಿಕ್ಕಂದಿನಿಂದಲೇ ಬೆಳೆಯುತ್ತಿದ್ದರು. ಏಕಾಂಗಿತನ ಅವರ ಬಾಳಲ್ಲಿ ಎಂದೂ ಬಂದಿಲ್ಲ. ಮನುಷ್ಯ ಭಾವನಾ ಜೀವಿ. ಅವನಿಗೆ ಒಬ್ಬಂಟಿಗನಾಗಿ ಬಾಳಲು ಬಹಳ ಕಷ್ಟ ಎಂಬುದು ಸತ್ಯ.
ಈ ಲೆಖನದ ಶೀಷರ್ಿಕೆ "ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ" ಅಂದರೆ ಇಂದು ಆಧುನಿಕ ಲೋಕದಲ್ಲಿ ಮಕ್ಕಳು ಏಕಾಂಗಿಯಾಗುತ್ತಿರುವುದನ್ನು ನಾವು ಕಾಣಬಹುದು. ಮಾಧ್ಯಮ ಲೋಕ ಮತ್ತು ಸಾಮಾಜಿಕ ಜಾಲತಾಣಗಳ ಮಾಯೆಗೆ ಸಿಲುಕಿರುವುದರಿಂದ ಸ್ನೇಹಿತರೊಟ್ಟಿಗೆ ಹಾಗೂ ಸಮಾಜದ ಜನರೊಟ್ಟಿಗೆ ಬೆರೆಯಲು, ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಳ್ಳಲು ಸಮಯವಿಲ್ಲ. ಒಬ್ಬಳು ತಾಯಿ ಮಗುವಿಗೆ ಜನ್ಮ ಕೊಟ್ಟು ಕೆಲವೆ ದಿನಗಳಲ್ಲಿ "ಪ್ಲೇ ಹೋಂ" ಗಳಲ್ಲಿ ಬಿಟ್ಟುತಾಯಿ-ತಂದೆಗಳಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅವರ ಮುಖವನ್ನೂ ಮಗು ನೊಡುವುದು ಅಪೂರ್ವವಾಗಿದೆ. ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಆದರೆ ಈಗಿನ ಒತ್ತಡದ ಜೀವನದಲ್ಲಿ ಅದೂ ದೊರಕದಾಗಿದೆ. ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 3 ವರ್ಷ ಆದ ಕೂಡಲೆ ಮಕ್ಕಳನ್ನು ಶಿಕ್ಷಣ ಪಡೆಯಲು ಕಳುಹಿಸುತ್ತಾರೆ. ಆ ಒತ್ತಡ ಮಕ್ಕಳ ಮೇಲೆ ಗಾಢ ಪರಿಣಾಮ ಬಿರುತ್ತದೆ. ಶಾಲೆಯಿಂದ ಮನೆಗೆ ಬಂದರೆ ಒಬ್ಬಂಟಿತನ ಕಾಡುತ್ತದೆ.
ಸಮ್ಮೋಹಿನಿ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಒಬ್ಬಂಟಿಯಾಗಿ ಶೂನ್ಯ ವ್ಯವಸ್ತೆಯಲ್ಲಿದ್ದಾಗ ಅಥವಾ ಮೈಮರೆತು ಯೋಚನೆಯಲ್ಲಿ ಇರುವಾಗ ಅನೇಕ ತರಹದ ಮಾನಸಿಕ ಕಾಯಿಲೆಗಳು ಆವರಿಸಿಕೊಳ್ಳುತ್ತವಂತೆ ಹಾಗೆಯೇ ಒಬ್ಬಂಟಿಯಾಗಿದ್ದಾಗ ದುರ್ಬಲ, ಋಣಾತ್ಮಕ ಚಿಂತನೆಗಳು ಆಳವಾಗಿ ಆವರಿಸಿ ಮನೋಸ್ತೆರ್ಯವನ್ನು ಕುಗ್ಗಿಸಬಹುದು, ಮಾನಸಿಕ ದೌರ್ಬಲ್ಯತೆ ಉಂಟಾಗಬಹುದು. ಏಕಾಂಗಿತನ ಬದುಕನ್ನು ಕುಂಟಿತಗೊಳಿಸಬಹುದು, ಮಾತಿನ ಕೌಶಲ್ಯತೆಗೆ ತೊಂದರೆಯಾಗಬಹುದು. ಎಲ್ಲರೊಟ್ಟಿಗೆ   ಕೂಡಿ ಬಾಳುವುದರಲ್ಲಿ ಇರುವ ಸುಖ ಏಕಾಂಗಿತನದ ಬದುಕಿನಲ್ಲಿಲ್ಲ. ಈಗಿನ ಬಹುತೇಕ ಮಕ್ಕಳ ಜೀವನದಲ್ಲಿ ಏಕಾಂಗಿತನಕ್ಕೆ ಒಗ್ಗಿ ಮನೋಸ್ತೆರ್ಯ ಕುಗ್ಗಿ, ಆತ್ಮ ವಿಶ್ವಾಸದ ಕೊರತೆಯುಂಟಾಗಿ ಆತ್ಮಹತ್ಯೆ, ಮಾನಸಿಕ ಖಿನ್ನತೆ, ಜಿಗುಪ್ಸೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಎಲ್ಲರೊಟ್ಟಿಗೆ ಬೆರೆತು ಕುಣಿದು ಕುಪ್ಪಳಿಸಿ, ಆಡಿಬೆಳೆದು ಸಧೃಡರಾಗಿ ಬೆಳೆಯಲು ಅವಕಾಶ ಕಲ್ಪಿಸೋಣ
ಬೆಳ್ಳಿಯಪ್ಪ
ಪ್ರಥಮ ಎಂ.ಎ ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017