9/23/14

ಬೆಳ್ಳಿ ಹಬ್ಬದ ಪೂರ್ವ ತಯಾರಿಯಲ್ಲಿ 



1991ರಲ್ಲಿ ಕೆಲವು ಜನರ ಕನಸಿನ ಕೂಸಾಗಿ ಬಿತ್ತಿಯ ಜನನವಾದಾಗ ಅನೇಕರ ಸಂತೋಷಕ್ಕೆ ಪಾರವೆ ಇರಲಿಲ್ಲ. ಕನ್ನಡ ವಿಭಾಗದ ಆಶ್ರಯದಲ್ಲಿ ಬೆಳೆಯುತ್ತಾ ಬಂದು ಈಗ 23ರ ಹರೆಯದ ನವ ತರುಣವಾಗಿ ಬಿತ್ತಿ ಬೆಳೆದು ನಿಂತಿದೆ. ಇದರ ಬಾಲ್ಯದ ಕಡೆಗೊಮ್ಮೆ ಕಣ್ಣು ಹಾಯಿಸಿದರೆ ಇದನ್ನು ಬೆಳೆಸುವಲ್ಲಿ ಅನೇಕರ ಶ್ರಮವಿರುವುದು ಕಂಡುಬರುತ್ತದೆ. ಮಾಧವ ಪೆರಾಜೆಯವರ ಸಂಪಾದಕತ್ವದಲ್ಲಿ, ಪೊ.ಬಿ.ಎ ವಿವೇಕರೈ ಅವರಮಾರ್ಗದರ್ಶನದಲ್ಲಿ, ಅರವಿಂದ ಮಾಲಗತ್ತಿಯವರ ಗೌರವ ಸಂಪಾದಕತ್ವದೊಂದಿಗೆ ಮುಂದೆ ಸಾಗುತ್ತಾ ಬಂದು ತದನಂತರ ಸುಚಿತ್ರ ಕೊಕ್ಕಡ ಅವರ ಸಂಪಾದಕತ್ವ ಮತ್ತು ಪ್ರೊ.ಸಬಿಹಾ ಭೂಮಿಗೌಡರ ಗೌರವ ಸಂಪಾದಕತ್ವದವರೆಗೆ ಅದೆಷ್ಟೋ ಸಂಪಾದಕರು ತಮ್ಮ ಹೆಜ್ಜೆ ಗುರುತುಗಳನ್ನು ಅಚ್ಚೊತ್ತಿ ಹೋಗಿದ್ದಾರೆ.
ಪ್ರಾರಂಭದ ದಿನಗಳಲ್ಲಿ ಗೋಡೆಯ ಬರಹವಾಗಿ ರೂಪು ತಳೆದ ಬಿತ್ತಿ ಸಾಪ್ತಾಹಿಕವು ತದನಂತರ ಎಲ್ಲಾ ವಿಭಾಗಗಳಿಗೂ ಹರಡಿಕೊಂಡ ಸಾಪ್ತಾಹಿಕ ಪತ್ರಿಕೆಯಾಗಿ ಜೀವ ತುಂಬಿ ವಿಶ್ವವಿದ್ಯಾನಿಲಯದಲ್ಲಿ ಹರಡಿಕೊಂಡಿತು. ಇದೀಗ ಬೆಳ್ಳಿಹಬ್ಬದ ಪೂರ್ವ ತಯಾರಿಯಲ್ಲಿ ಬಂದು ನಿಂತಿದೆ. ಆರಂಭದ ಮನ್ನಣೆ ಇಂದು ಪತ್ರಿಕೆಗಳಿಗೆ ಸಿಗುತ್ತಿಲ್ಲ. ಕಾಲ ಬದಲಾದಂತೆ ಬಿತ್ತಿಗು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಬಿತ್ತಿಯು ಕೇವಲ ಗೋಡೆಯ ಮೇಲಿನ ಪ್ರತಿಯಾಗಿ, ಅಥವಾ ಇನ್ಯಾವುದೋ ನಾಲ್ಕು ಬಿಳಿ ಹಾಳೆಗಳ ನಡುವಿನ ಅಕ್ಷರವಾಗಿ ಉಳಿಯುವುದರಿಂದ ನಾಲ್ಕು ಹೆಜ್ಜೆ ಮುಂದೆ ಹೋಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಧುನಿಕ ವಿದ್ಯಮಾನಕ್ಕೆ ತೆರೆದುಕೊಳ್ಳುವ ಹೊಸ ಸವಾಲನ್ನು ಹೊಂದಿದೆ.
ಬಿತ್ತಿಯ ಸ್ವರೂಪವನ್ನು ಬದಲಾಯಿಸುವ ಪ್ರಯೋಗಕ್ಕೆ  ನಮ್ಮ ಬಿತ್ತಿ ತಂಡ ಪ್ರಯತ್ನಿಸುತ್ತಿದೆ. ಅದರ ಮೊದಲ ಪ್ರಯತ್ನವಾಗಿ ಬಿತ್ತಿಗೆ ಆಧುನಿಕ ಕಾಯಕಲ್ಪವೊಂದನ್ನು ನೀಡುವ ಉದ್ದೇಶದಿಂದ ಬ್ಲಾಗ್ ಒಂದನ್ನು ಆರಂಭಿಸಿ, ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಅದೇ ಸಮಯದಲ್ಲಿ ಓದುಗ ಆಸಕ್ತರ ಅಭಿರುಚಿಗೆ ತಕ್ಕಂತೆ ಬಿತ್ತಿ ಪತ್ರಿಕೆಯ ಸ್ವರೂಪವನ್ನು ಬದಲಾಯಿಸಿ ಹೊರ ತರುತ್ತಿದ್ದೇವೆ . ಬಿತ್ತಿ ಬಳಗದ ಸಂಪಾದಕೀಯ ತಂಡವು ಹೊಸ ಹುರುಪಿನಿಂದ ಕೆಲಸ ನಿರ್ವಹಿಸುತ್ತಿದ್ದು ಆಸಕ್ತ ಸಾಹಿತ್ಯ ಸಹೃದಯರ ಬೆಂಬಲವೂ ನಮಗೆ ದೊರೆಯುತ್ತಿದೆ. ಇದೇ ಬೆಂಬಲ ಮುಂದೆಯೂ ದೊರೆಯಲಿ ಎಂಬ ಆಶಯ ನಮ್ಮದು.
                                             

ಲೋಕೇಶ್ ಕುಕ್ಕುಜೆ
ಸಂಪಾದಕರು 
                                     

No comments:

Post a Comment

  ಬಿತ್ತಿ ವಿಶೇಷಾಂಕ 2017