9/23/14

ಆ ಮೂರ್ತಿಯನ್ನೊಮ್ಮೆ  ನೆನಪಿಸಿದಾಗ

ಯು.ಆರ್. ಅನಂತಮೂರ್ತಿ
ಅಂತರ್ಜಾಲ ಚಿತ್ರ

ಓದುಗ ಸಮುದಾಯಕ್ಕೆ ಪ್ರಶ್ನೆಗಳನ್ನು ಮೂಡಿಸಿದ್ದ, ಹುಟ್ಟುಹಾಕಿದ್ದ ಕೀರ್ತಿ ಬಹುವಾಗಿ  ನವ್ಯದ ಕಾಲಘಟ್ಟದ ಬರಹಗಾರರಿಗೆ ಸಲ್ಲಬೇಕು. ಓದುಗರ ತಿಳುವಳಿಕೆಯನ್ನು ಒರೆಗೆ ಹಚ್ಚುವ ಕೆಲಸ ನವ್ಯ ಸಾಹಿತಿಗಳಿಂದ ನಡೆಯಿತು. ಸಾಹಿತ್ಯದ ಮೂಲ ರೂಪವಾಗಿ ಪ್ರಜ್ಞಾವಂತ ಓದುಗ ವರ್ಗವನ್ನು ರೂಪಿಸಿ ಬೆಳೆಸಿಕೊಂಡು ಬಂದಿರುವುದೇ   ನವ್ಯದ ನಾಯಕರ ಕಾಲದಲ್ಲಿ ಎಂದು ಹೇಳಬಹುದು. ಇಂಥ ಒಂದು ಓದುಗ ಅಭಿಮಾನಿಗಳ ವರ್ಗವನ್ನು ಹುಟ್ಟುಹಾಕಿ ಬೆಳೆಸುತ್ತಾ ಬಂದವರಲ್ಲಿ ಯು.ಆರ್. ಅನಂತಮೂರ್ತಿ  ಅವರು ಸಹ ಒಬ್ಬರು.
ಸಂಸ್ಕಾರ ,ಭಾರತೀಪುರ, ಘಟಶ್ರಾದ್ದ, ದಿವ್ಯ, ಭವ, ದಂತಹ ಕೃತಿಗಳ ಮೂಲಕ ಅದೆಷ್ಟು ತತ್ವ ವಿಚಾರಗಳನ್ನು ಬರೆಯುತ್ತಾ ಬಂದು ಬರಹದುದ್ದಕ್ಕೂ ವಿಮರ್ಶೆಯನ್ನು ಹುಟ್ಟು ಹಾಕುತ್ತಾ ಪ್ರಶ್ನೆಗಳನ್ನು ಮೂಡಿಸಿ ಓದುಗರಲ್ಲಿ ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದು ಬಿಡುವುದು ಅವರ ಬರಹದ ವಿಶೇಷ. ಇಂಗ್ಲೀಷ್ ಶಿಕ್ಷಣದ ಪ್ರಭಾವ, ತನ್ನ ಜಾತಿಯ ಕೆಲವು ಕುರುಡು ಆಚರಣೆಗಳು ಇವುಗಳ ಒಂದಕ್ಕೊಂದು ತಾಕಲಾಟಗಳ ಘರ್ಷಣೆಯ ಉರಿಯನ್ನು ತನ್ನ ಬರಹದುದ್ದಕ್ಕೂ ಮೂಡಿಸಿಕೊಂಡು ಹೋಗುವುದು, ಇವರು ಓದುಗನನ್ನು ಹಿಡಿದಿಟ್ಟುಕೊಳ್ಳುವ ಒಂದು ತಂತ್ರವು ಹೌದು.
ತನ್ನ ಜೀವನದ ಉದ್ದಕ್ಕೂ ಭಾರೀ ಚರ್ಚೆಗಳನ್ನು ಹುಟ್ಟು ಹಾಕಿದವರಲ್ಲಿ ಅನಂತಮೂರ್ತಿಯವರನ್ನು ಬಿಟ್ಟರೆ ಕನ್ನಡ ಸಾಹಿತಿಗಳಲ್ಲಿ ಇನ್ನೊಬ್ಬ ಸಿಗಲಾರರು. ತಮ್ಮ ಬರಹ, ಮಾತುಗಾರಿಕೆಯ ಕಲೆಯಿಂದ ಎಂಥವರನ್ನೂ ಮೋಡಿಗೋಳಿಸತ್ತಿದ್ದ ಅ ವಾಗ್ಮಿಗೆ ವಿರೋಧಗಳು ಕಡಿಮೆಯಿರಲಿಲ್ಲ.
ಅನಂತಮೂರ್ತಿಯವರಂತಹ ಸಾಹಿತಿಯೊಬ್ಬ ರಾಜಕಾರಣಿಯನ್ನು ಖಂಡಿಸಿ ನೀಡಿದ ಹೇಳಿಕೆಗಳು ಅತಿಶಯೋಕ್ತಿ ಎನಿಸಿದರೂ ಪ್ರಜಾಪ್ರಭುತ್ವ ದೇಶದಲ್ಲಿ ಅದು ತಪ್ಪೆಂದು ಕಾಣಿಸಲಾರದು.
 ಪ್ರತಿಯೊಂದನ್ನು ವೈಚಾರಿಕ ನೆಲೆಗಟ್ಟಲ್ಲಿ ವಿಮರ್ಶಿಸುವ ಅನಂತಮೂರ್ತಿಯವರು ತಮ್ಮ ಸಾವಿನಲ್ಲೂ ಸುದ್ದಿಯಾದರು. ವಿವಾದದ ಅಲೆಗಳನ್ನು ಹುಟ್ಟಿಹಾಕಿದರು. ದೇವರು, ನಂಬಿಕೆ, ಧರ್ಮ ಇವುಗಳ ಸಾಚಾತನದ ಬಗ್ಗೆ ಪ್ರಶ್ನೆಯನ್ನು ಮೂಡಿಸಿದರು. ಯಾವ ಕ್ರಿಯಾ ವಿಧಿಗಳನ್ನು ತಮ್ಮ ಬರಹದ ಮೂಲಕ ಅಲ್ಲಗಳೆದರೋ, ಯಾವ ಮಂತ್ರ ಘೋಷಗಳನ್ನು ತರ್ಕಿಸಿದರೊ ಕೊನೆಗೆ ಅದೆ ಮಂತ್ರ ಘೋಷಗಳ ಸದ್ದಿನಲ್ಲಿ ಅವರು ಲೀನವಾಗಿ ಹೋದದ್ದು ಒಂದು ವಿಪರ್ಯಸವಾಗಿ ನಮ್ಮನ್ನು ಕಾಡುತ್ತಿರುವುದು ಮಾತ್ರ ಸತ್ಯ.


ಲೋಕೇಶ್ ಕುಕ್ಕುಜೆ
ಸಂಪಾದಕರು 
ದ್ವಿತೀಯ ಎಂ.ಎ ಕನ್ನಡ                                                                        


No comments:

Post a Comment

  ಬಿತ್ತಿ ವಿಶೇಷಾಂಕ 2017