9/23/14

ಅಂತರ್ಜಾಲ ಚಿತ್ರ

ಅಮ್ಮನ ಪ್ರೀತಿ ಮರೆತೆಯಾ

ಗೆಳೆಯಾ, ಅಮ್ಮನ ಕಣ್ಣ ಹಣತೆಯ ಬೆಳಕಿನಲ್ಲಿ ಬೆಳೆದು
ದೊಡ್ದವನಾದವನು ನೀನು ಈಗ...
ಮೋಹದ ಹೆಣ್ಣಿನ ಕಣ್ಣ ನಕ್ಷತ್ರದ ಸೆಳೆತಕ್ಕೆ ಸಿಲುಕಿ
ಅಮ್ಮನಿಗೆ ಬೆನ್ನು ತಿರುಗಿಸುವೆಯಾ!
ಅಮ್ಮನ ತೊಡೆಯಲಿ ಮಲಗಿ ಬೆಚ್ಚಗೆ ಕನಸು ಕಾಣಲು
ಕಲಿತವನು ನೀನು
ರಕ್ತಮಾಂಸಗಳನ್ನು ಅಮ್ಮನಿಂದ ಎರವಲು
ಪಡೆದಿರುವುದನ್ನು ಮರೆತೆಯಾ
ಈಗ ಬೇರೊಂದು ಹೆಣ್ಣಿನ ನುಣುಪು ಕೆನ್ನೆಗಳ
ಮೋಹಕ್ಕೆ ಸಿಕ್ಕಿ
ಅಮ್ಮನ ಸುಕ್ಕುಗೆನ್ನೆಗೆ ಮುತ್ತಿಡುವುದನ್ನು ಮರೆವೆಯಾ!
ಒಂದು ಕಾಲಕ್ಕೆ ನಿನ್ನ ಅಮ್ಮನಿಗೂ ಆ ಹೆಣ್ಣಿನಂತಹ
ಯೌವ್ವನವಿತ್ತು ರಟ್ಟೆಗಳಲ್ಲಿ ಬಲವಿತ್ತು
ನಕ್ಷತ್ರದಂತ ಕಣ್ಣಿತ್ತು ಕಣ್ಣಳಲ್ಲಿ ಕನಸಿತ್ತು
ಸೋತರೂ ಗೆಲ್ಲುವ ವಿನಯವಿತ್ತು
ಅಮ್ಮನು ಸುರಿಸಿದ ಮೈ ಬೆವರಿನಲ್ಲಿ ನಿನ್ನ ಭವಿಷ್ಯವಿತ್ತು
ಈಗ ಅದನ್ನೆಲ್ಲಾ ಮರೆತೂ ಬೇರೊಂದು ಹೆಣ್ಣಿನ
ಸೀರೆ ಸೆರುಗಿನಲ್ಲಿ ಮುಖ ಹುದುಗಿಸಿ
ಅಮ್ಮನನ್ನು ಮುರುಕಲು ಸೂರಿನಡಿ ಕೂರಿಸಿ
ಬದುಕ ಪ್ರೀತಿಸುವ ಕ್ರೂರಿ ನೀನಾಗಬೇಡಾ ಗೆಳೆಯಾ....!!!

ಅರ್ಚನಾ ಎಸ್. ಶೆಟ್ಟಿ 
ಪ್ರಥಮ ಎಂ.ಎ. ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017