9/23/14

 ಪತಾಕೆ

ಇಡೀ ಊರಿಗೆ ಊರೇ ಸ್ವಾತಂತ್ರ್ಯೋತ್ಸವದ ಸಿದ್ಧತೆಯ ಸಂಭ್ರಮದಲ್ಲಿದೆ. ಬೇರೆ ಬೇರೆ ಊರಿಗೆ ಕೆಲಸದ ನಿಮಿತ್ತ ಹೋಗಿದ್ದ ಶಾಲೆಯ ಹಳೆ ವಿದ್ಯಾಥರ್ಿಗಳು ಸ್ವಾತಂತ್ರ್ಯೋತ್ಸವಕ್ಕೆ ಆಗಮಿಸಿದ್ದರು. ಏ.....ಅಬ್ದುಲ್ಲಾ... ಹೇಗಿದ್ದೀಯ? ಏ.....ಆರಾಮ್.....ಕಣೋ ವೆಂಕಟೇಶ, ನೀನು ಹೇಗಿದ್ದೀಯಾ? ಆರಾಮ್.....ಕಣೋ....ಮತ್ತೆ ಬಾಂಬೆ ಹೇಗಾಗ್ತದೆ? ಎಂದು ವೆಂಕಟೇಶ ಮಾತು ಮುಂದುವರಿಸಿದ. ಎಂತದಾ... ಬೆಳಗ್ಗಿನಿಂದ ಸಂಜೆತನಕವು ಕೆಲಸವೇ ಆಗ್ತದೆ, ಪುರುಸೊತ್ತೇ ಇಲ್ಲ ಮಾರಾಯ ಎಂದು ಅಬ್ದುಲ್ಲಾ ಉತ್ತರಿಸಿದ. ಸರಿ ನಾಳೆ ಶಾಲೆಗೆ ಬರ್ತೀಯ ಅಲ್ವ ನಾಡಿದ್ದಿಗೆ ಡೆಕೊರೇಶನ್ ಆಗ್ಲಿಕ್ಕೆ ಉಂಟು ಎಂದ ವೆಂಕಟೇಶನಿಗೆ, ಸರಿ ಬರ್ತೇನೆ ಎಂದು ಅಬ್ದುಲ್ ಪ್ರತ್ಯುತ್ತರಿಸಿದನು.
ತನ್ನ ಮನೆಗೆ ಬಂದ ವೆಂಕಟೇಶ, ಅಮ್ಮ ಅಬ್ದುಲ್ ಬಾಂಬೆಯಿಂದ ಬಂದಿದ್ದಾನೆ ಎಂದ. ಹೌದಾ....ಉಮ್ಮ ಮತ್ತು ಕಾಕಾ ಬಂದಿದಾರ? ಎಂದು ವೆಂಕಮ್ಮ ಪ್ರಶ್ನಿಸಿದಳು. ಇಲ್ಲ, ಗೊತ್ತಿಲ್ಲ ನಾನು ಕೇಳಿಲ್ಲ ಎಂದ ವೆಂಕಟೇಶ. ಕೂಡಲೇ ವೆಂಕಮ್ಮ ಸರಿ, ನಾನು ಹೋಗಿ ಮಾತನಾಡಿ ಬರ್ತೇನೆ ಎಂದು ಹೊರಟು ಹೋದಳು.
 ಇತ್ತ ವೆಂಕಮ್ಮ, ಖತೀಜಾಬಿ ಅವರ ಮನೆಯ ಗೇಟನ್ನು ತೆರೆದು ಒಳಗೆ ಪ್ರವೇಶಿಸುತ್ತಿದ್ದಂತೆ ಬನ್ನಿ ವೆಂಕಮ್ಮ ಹೇಗಿದ್ದೀರಿ? ಎಂದಳು ಖತೀಜಾಬಿ. ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ ಉಮ್ಮ? ಎಂದಳು ವೆಂಕಮ್ಮ. ಚೆನ್ನಾಗಿದ್ದೇನೆ, ಮತ್ತೆ ವಿಶೇಷ ವೆಂಕ್ಟೇಶನಿಗೆ ಮದುವೆ ಮಾಡುವ ಯೋಚನೆ ಉಂಟ? ಹೇಳ್ತಾ ಇದ್ದೇವೆ ಮದುವೆ ಮಾಡ್ಕೊ ಮಾರಾಯ ಅಂತ. ಆದ್ರೆ ಅವನು ಅದರ ಯೋಚನೆಯಲ್ಲೇ ಇಲ್ಲ ಎಂದು ವೆಂಕಮ್ಮ ಉತ್ತರಿಸಿದಳು. ಇವರಿಬ್ಬರ ಮಾತು ಮುಂದುವರಿಯುತ್ತಿದ್ದಂತೆ ಹಸನಬ್ಬ ಬಂದುದನ್ನು ಕಂಡು, ವೆಂಕಮ್ಮ ಹೇಗಿದ್ದೀರಿ ಕಾಕಾ ಎಂದಳು. ಹಾಂ...ಚೆನ್ನಾಗಿದ್ದೇನೆ ಮನೆಯಲೆಲ್ಲಾ ಚೆನ್ನಾಗಿದ್ದಾರ ಎಂದರು ಹಸನಬ್ಬ. ಹಾಂ....ಚೆನ್ನಾಗಿದ್ದಾರೆ ಎಂದಳು ವೆಂಕಮ್ಮ. ಇವರ ಮಾತು ಮುಂದುವರಿಯುತ್ತಿದ್ದಂತೆ, ಸೂರ್ಯ ಪಶ್ಚಿಮಕ್ಕೆ ವಾಲುತ್ತಿರುವುದನ್ನು ಗಮನಿಸಿದ ವೆಂಕಮ್ಮ ಮನೆಗೆ ತೆರಳಿದಳು.








 ಮರುದಿನ, ಮುಂಜಾನೆ ಜನರೆಲ್ಲಾ ಎದ್ದು ತಮ್ಮ ತಮ್ಮ ದೈನಂದಿನ ಕೆಲಸ ಮುಗಿಸಿ ಶಾಲೆಯನ್ನು ಸ್ವಚ್ಛಗೊಳಿಸಲು ಹೊರಟರು. ಊರಿಗೆ ಊರೇ ಬಂದು ಸೇರಿತು. ಎಲ್ಲರೂ ಒಟ್ಟಾಗಿ ಶಾಲೆಯ ವಾತಾವರಣವನ್ನು ಶುಚಿಗೊಳಿಸಿ ಬಳಿಕದಲ್ಲಿ ಕೇಸರಿ, ಹಸಿರು, ಬಿಳಿ, ಪತಾಕೆಗಳನ್ನು ಎತ್ತರ ಎತ್ತರವಾಗಿ ನೆಟ್ಟರು. ಕಟ್ಟಡದ ಒಂದು ಬದಿಯಲ್ಲಿ ಕೇಸರಿ ಬಣ್ಣದ  ಕಾಗದದ ತೋರಣಗಳು ರಾರಾಜಿಸಿದವು. ಇನ್ನೊಂದು ಬದಿಯಲ್ಲಿ ಹಸಿರು ಬಣ್ಣದ ಕಾಗದದ ತೋರಣಗಳು ರಾರಾಜಿಸಿತು. ಮತ್ತೊಂದು ಬದಿಯಲ್ಲಿ ಬಳಿ ಬಣ್ಣದ  ಕಾಗದದ ತೋರಣಗಳು ರಾರಾಜಿಸಿದವು. ಮರುದಿನಕ್ಕೆ ಈ ಎಲ್ಲಾ ಸಿದ್ಧತೆ ನಡೆಸಿ ಮನೆಗೆ ತೆರಳಿದರು. ಹೊತ್ತು ಮುಳುಗಿ ರಾತ್ರಿಯಾಗುತ್ತಿದ್ದಂತೆ ಎಲ್ಲರು ನೆಮ್ಮದಿಯಿಂದ ನಿದ್ರಿಸಿದರು. ಬೀದಿಯಲ್ಲಿದ್ದ ಆಡುಗಳು ಮಾತ್ರ ಕಟ್ಟಿದ್ದ ಕಾಗದದ ತೋರಣಗಳನ್ನು ತಿನ್ನುತ್ತಿದ್ದವು.
ಮರುದಿನ ಎಲ್ಲರ ಮುಖದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಕುಣಿಯುತ್ತಿತ್ತು. ಊರಿಗೆ ಊರೇ ಶಾಲೆಯ ಕಡೆ ಧಾವಿಸಿತು. ಕಾಗದದ ತೋರಣಗಳನ್ನು ಕಟ್ಟಿದ ಹಗ್ಗ ಕಡಿದು ಬಿದ್ದದ್ದನ್ನು ಗಮನಿಸಿದ ಜನರ ಗುಂಪು, ಪಿಸುಪಿಸು ಮಾತನಾಡುತ್ತಾ ತನ್ನಿಂತಾನಾಗಿಯೇ ವಿಭಾಗವಾಯಿತು. ಶಾಲೆಯ ಮುಖ್ಯೋಪಾಧ್ಯಾಯರು ಧ್ವಜವನ್ನು ಕಟ್ಟಿ, ಧ್ವಜ ಸ್ತಂಭದ ತುದಿಗೇರಿಸಿದರು. ಗಣ್ಯರು ಧ್ವಜಾರೋಹಣ ನಡೆಸಿದರು. ಎಲ್ಲರೂ ಧ್ವಜಕ್ಕೆ ಗೌರವ ಸೂಚಿಸುತ್ತಿದ್ದಂತೆ ಗುಂಪುಗಳು ಪರಸ್ಪರ ಕಾದಾಟಕ್ಕೆ ಮುಂದುವರಿದವು. ಜನರಲ್ಲಿದ್ದ ಈ ಕಾದಾಟ ಸಮಯ ಕಳೆಯುತ್ತಿದ್ದಂತೆ ಪತಾಕೆಗಳಿಗೂ ಹರಡಿತು. ಕಾದಾಟ ಮುಂದುವರಿದು ಪತಾಕೆಗಳು, ಕಾಗದದ ತೋರಣಗಳು ನೆಲಕ್ಕುರುಳಿದವು. ನೋಡು ನೋಡುತ್ತಿದ್ದಂತೆ ಜನರೂ ನೆಲಕ್ಕುರುಳಿದರು. ಕ್ಷಣದಲೇ ಇಡೀ ಊರನ್ನೇ ಸ್ಮಶಾನ ಮೌನವು ಆವರಿಸಿತು.
ಆಕಾಶದಲ್ಲಿ ರಣಹದ್ದು, ಕಾಗೆಗಳ ಹಾರಾಟದ ನಡುವೆ ಧ್ವಜಸ್ತಂಭದಲ್ಲಿದ್ದ ತ್ರಿವರ್ಣಧ್ವಜ ತಲೆತಗ್ಗಿಸಿ ನಿಂತೇ... ಇತ್ತು.                                    
ದೀಪಕ್ ಎನ್ ದುರ್ಗ
                                                   ದ್ವಿತೀಯ ಎಂ.ಎ.ಕನ್ನಡ
ಕನ್ನಡ ವಿಭಾಗ.

No comments:

Post a Comment

  ಬಿತ್ತಿ ವಿಶೇಷಾಂಕ 2017