9/23/14

ಮಾತು..!

ಪೃಥಿವ್ಯಾಂ ತ್ರೀಣಿರತ್ನಾನಿ ಜಲಮಾನ್ಯಂ ಸುಭಾಷಿತಂ
ಮೂಢೈ ಪಾಶಾಣ ಖಂಡೇಷು ರತ್ನ ಸಂಜ್ಞಾ
ವಿಧೀಯತೇ
ಭೂಮಿಯ ಮೇಲೆ ಮೂರು ವಸ್ತುಗಳನ್ನು ಶ್ರೇಷ್ಟವೆಂದು ಪರಿಗಣಿಸಲಾಗಿದೆ. ಅವೆಂದರೆ ಅನ್ನ, ನೀರು ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರನ್ನು ಶ್ರೇಷ್ಟ ರತ್ನವೆಂದು ಭಾವಿಸಿದ್ದಾರೆಂದು ಸುಭಾಷಿತವೊಂದು ಹೇಳುತ್ತದೆ.
ಮಾತು ಎನ್ನುವುದು ನಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮ ಮಾತ್ರವಲ್ಲ ವ್ಯಕ್ತಿತ್ವದ ಕೈಗನ್ನಡಿಯೂ ಹೌದು. ಅದು ಮಧುರವಾಗಿರಬೇಕು, ಇನ್ನೊಬ್ಬರನ್ನು ನೋಯಿಸುವಂತಿರಬಾರದು. ಬಸವಣ್ಣ ತನ್ನ ವಚನವೊಂದರಲ್ಲಿ ಹೇಳುವಂತೆ ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತಿರಬೇಕು. ಕಠಿಣವಾದ ನುಡಿಗಳಿಗಿಂತ ಮೃದುವಾದ, ಹಿತವಾದ ನುಡಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಕೆಲವೊಂದು ಒಳ್ಳೆಯ ಮಾತುಗಳು ಇನ್ನೊಬ್ಬರ ಜೀವನವನ್ನೇ ಬದಲಿಸಬಹುದು. ನಾವಾಡುವ ಮಾತು ನಮ್ಮ ಸಂಸ್ಕಾರವನ್ನು ಪ್ರತಿನಿಧಿಸುತ್ತದೆ. ಸರ್ವಜ್ಞ ಕವಿ ಮಾತಿನ ಬಗ್ಗೆ - ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರಿ ಮಾತು ಕಿವಿಯೊಳ್ ಕೂರ್ದಸಿಯ ಬಡಿದಂತೆ ಎನ್ನುತ್ತಾರೆ.
ಮಾತುಗಾರಿಕೆ ಎನ್ನುವುದು ಒಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳುವುದು ತುಂಬಾ ಕಷ್ಟ. ಮಾತನಾಡುವವರು ನಿಜವಾಗಿಯೂ ಜ್ಞಾನವುಳ್ಳವರಾಗಿರಬೇಕು. ಹದವರಿತು, ಸಂದರ್ಭವನ್ನರಿತು ಮಾತನಾಡಬೇಕು. ವ್ಯಾಸಸ್ಮೃತಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ : ನೂರರಲ್ಲಿ ಒಬ್ಬ ಮಾತ್ರ ಶೂರನಾಗುತ್ತಾನೆ. ಸಾವಿರದಲ್ಲಿ ಒಬ್ಬ ಮಾತ್ರ ವಿದ್ವಾಂಸ, ಹತ್ತು ಸಾವಿರದಲ್ಲಿ ಒಬ್ಬ ಮಾತ್ರ ಚತುರ ಮಾತುಗಾರನಾಗಬಲ್ಲ.
ಆದುದರಿಂದ ಮಾತುಗಾರಿಕೆ ಚತುರತೆಯ ಪ್ರದರ್ಶನವೂ ಹೌದು. ಮಾತಿನ ಕೌಶಲ್ಯದಿಂದ ಕುಳಿತಲ್ಲೇ, ನಿಂತಲ್ಲೇ ಜಗವನ್ನು ಆಳಬಹುದು.
ನುಡಿದ ಮಾತಿಂಗೆ ತಡಬಡ ಬಂದಲ್ಲಿ ನುಡಿದ ಭಾಷೆಗೆ ಭಂಗ ನೋಡ, ಹಿಡಿದ ಕುಲಕ್ಕೆ ಹಾನಿ ಬಂದಲ್ಲಿ ಒಡಲವಿರಿಸುವುದೆ ಭಂಗ ನೋಡಯ್ಯ, ಇದು ಕಾರಣ ನಡೆನುಡಿ ಶುದ್ದವಿಲ್ಲದಿದ್ದೆಡೆ ಚಂಡೇಶ್ವರ ಲಿಂಗವಾದರೂ ತಪ್ಪಿನೊಪ್ಪಿಗೊಳ್ ಮಡಿವಾಳಯ್ಯ. ಇದು ವಚನಕಾರ ಚಂದ್ರಯ್ಯನ ನುಡಿ. ಅವರ ಪ್ರಕಾರ ಮಾತು ಪ್ರಿಯವಾಗಿ, ಪ್ರಾಸಂಗಿಕವಾಗಿ, ಮೃದುವಾಗಿ,
ಪ್ರಯೋಜನಕಾರಿಯಾಗಿರಬೇಕು. ಮಾತಿಗೆ ಹೊತ್ತುಗೊತ್ತುಗಳಿರಬೇಕು, ಮನಸ್ಸಲ್ಲಿ ಲಕ್ಷ್ಯ ಮತ್ತು ನಾಲಿಗೆ ಹತೋಟಿಯಲ್ಲಿರಬೇಕು. ಮಾತು ಮಾಣಿಕ್ಯದಂತೆ ಒಮ್ಮೆ ಆಡಿದ ಮಾತು ಮತ್ತೆ ಸಿಗುವುದಿಲ್ಲ. ಆದರೆ ಅವು ನಾಶವಾಗುವುದು ಇಲ್ಲ. ಮಾತು ಮಾತಿಗೆ ಸೇರಿ ಜನಿಸಿದ್ದು ಪ್ರೀತಿ, ಮಾತು ಮಾತಿಗೆ ತಾಗಿ ಹುಟ್ಟಿದ್ದು ಭೀತಿ, ಮಾತು ಅರಿದಾತನಿಗೆ ಮಾನ ಮಯರ್ಾದೆ, ಮಾತನರಿಯದ ಮನಕೆ ನಾನಾ ತಗಾದೆ. ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದು ವಚನ ಮೂಲರ್ೊಕ ಜಯಿಸುವುದು ತಿಳಿಯಾ, ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ, ಮೂರು ಗಳಿಗೆಯ ಬಾಳು ಘಮ ಘಮಿಸುತಿರಲಿ ಎಂದು ಕವಿ ದಿನಕರ ದೇಸಾಯಿಯವರು ಹೇಳುತ್ತಾರೆ.
ಆತ್ಮ ಸಂಸ್ಕಾರದ ಒಂದು ರೂಪವಾದ ಮಾತನಾಡುವ ಕಲೆಯು ಮಗು ಪ್ರಪಂಚಕ್ಕೆ ಬಂದಂದಿನಿಂದಲೂ ತನ್ನ ಜೀವನದ ಕೊನೆಯವರೆಗೂ ಅವಿರತವಾಗಿ ಸಾಗುವ ಒಂದು ಸಚೇತನ ಕ್ರಿಯೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.


ಪವಿತ್ರ ಶೆಟ್ಟಿ
ಪ್ರಥಮ ಎಂ.ಎ. ಕನ್ನಡ
 


No comments:

Post a Comment

  ಬಿತ್ತಿ ವಿಶೇಷಾಂಕ 2017