1/21/15

ವಿಧಿಯಾಟ
ಉಮಾ ಹುಟ್ಟುತ್ತಲೇ ಶ್ರೀಮಂತಳಾಗಿ ಬೆಳೆದಳು. ವಯಸ್ಸಿಗೆ ಸಹಜವಾಗಿ ಮದುವೆಯೂ ಆಯಿತು. ಆದರೆ ಅವಳ ಸುಖ ಸಂತೋಷ ಅವಳ ಸಾಂಸಾರಿಕ ಬದುಕಿನ ಆರಂಭದೊಂದಿಗೆ ಕೊನೆಯಾಯಿತು. ಅವಳ ದುರಾದೃಷ್ಟವೋ ಎಂಬಂತೆ ಯಾವುದೋ ಜ್ವರ ಕಾಣಿಸಿಕೊಂಡು ಕಿವಿಯಲ್ಲಿ ಗುಳ್ಳೆಗಳಾಗಿ ಅದು ಒಡೆದು ಕಿವಿ ಕೇಳಿಸದಾಯಿತು. ತಂದೆ- ತಾಯಿಯ ಮುದ್ದಿನ ಆರೈಕೆಯಲ್ಲಿ ಬೆಳೆದ ಉಮಾ ಗಂಡನ ಮನೆಯಲ್ಲಿ ನೋವು, ಕಷ್ಟ, ಅವಮಾನಗಳನ್ನು ಎದುರಿಸಬೇಕಾಯಿತು. ಗಂಡ ತನ್ನ ತಾಯಿಯ ಮಾತು ಕೇಳಿ ಅವಳಿಗೆ ಔಷಧವನ್ನು ಕೊಡಿಸದಾದ ಗಂಡನ ತಿರಸ್ಕಾರದ ನಡುವೆಯೂ ತನ್ನ ತವರು ಮನೆಯವರ ಆಶ್ರಯದಲ್ಲಿ ಬದುಕು ಸಾಗಿಸಲಾರಂಭಿಸಿದಳು. ವರ್ಷಕ್ಕೊಮ್ಮೆ ಬಂದು ಹೋಗುವ ಗಂಡನ ದರ್ಪದಾಟವೋ ಎಂಬಂತೆ ಹೆಣ್ಣು ಮಗುವೊಂದಕ್ಕೆ ತಾಯಿಯಾದಳು. ಸಾಯಲು ಮನಸ್ಸು ಮಾಡುತ್ತಿದ್ದ ಅವಳ ಜೀವ ಮಗುವಿಗಾಗಿ ಬದುಕಿ ಉಳಿಯಿತು. ಕಷ್ಟ ಪಟ್ಟು ಮಗುವನ್ನು ಬೆಳೆಸಿದಳು. ಅವಳ ತಂದೆ - ತಾಯಿ ಅಕ್ಕ ತಂಗಿ ಅವಳಿಗೆ ಆಸರೆಯಾಗಿ ನಿಂತರು. ತನ್ನ ಕಷ್ಟವನ್ನೆಲ್ಲಾ ನುಂಗಿ ಮಗಳಿಗೆ ಪ್ರೀತಿ ಧಾರೆಯೆರೆದು ಅವಳನ್ನು ಚೆನ್ನಾಗಿ ಬೆಳೆಸಿದಳು. ಮಗಳು ಬೆಳೆದು ದೊಡ್ಡವಳಾದಳು ಇನ್ನೇನು ತನ್ನ ಕಷ್ಟ ತೀರಿತು ಎನ್ನುವಾಗಲೇ ಕ್ರೂರ ವಿಧಿ ಅವಳ ಬಾಳಿನಲ್ಲಿ ಪುನಃ ಆಟವಾಡತೊಡಗಿತು. ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಬೆಳೆಸಿದ ತನ್ನ ಮಗಳು ಸ್ನೇಹಾ ಅವಳ ಕಲ್ಪನೆಯಂತೆ ಇದ್ದಳು. ಎಲ್ಲರ ಪ್ರೀತಿಗೆ ಪಾತ್ರಳಾಗಿ ಎಲ್ಲರನ್ನೂ ಗೌರವದಿಂದ ಕಾಣುತ್ತಾ, ಪರರ ಕಷ್ಟಕ್ಕೆ ಸ್ಪಂದಿಸುತಾ,್ತ ಎಲ್ಲರಿಗೂ ಒಳಿತನ್ನೆ ಬಯಸುತಾ,,್ತ ತನ್ನಿಂದಾದ ಸಹಾಯ ಮಾಡುತ್ತಾ ಸುಂದರ ಬದುಕು ಕಟ್ಟಿಕೊಂಡಿದ್ದ ಸ್ನೇಹಾಳ ಬಾಳಿಗೆ ಹುಟ್ಟಿಗೆ ಕಾರಣವಾದ ತಂದೆಯೇ ಮುಳುವಾದ. ವಿದ್ಯಾಭ್ಯಾಸಕ್ಕೆ ತೆರಳುವ ತನ್ನ ಮಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸತೊಡಗಿದ. ಅವಳು ಶೀಲಗೆಟ್ಟವಳು ಎಂಬ ಹಣೆಪಟ್ಟಿ ಕಟ್ಟಿದ, ಗುರು-ಶಿಷ್ಯರ ಸಂಬಂಧಕ್ಕೆ ಅಪಾರ್ಥ ಕಲ್ಪಿಸಿ, ಸ್ನೇಹ ಭಾಂದವ್ಯದ ಪದಗಳಿಗೆ ವ್ಯಭಿಚಾರದ ಅರ್ಥ ನೀಡಿ ಅಪಪ್ರಚಾರ ಮಾಡತೊಡಗಿದ. ಏನೂ ಅರಿಯದ, ಸಂಬಂಧಗಳನ್ನು ಗೌರವಿಸುತ್ತಿದ್ದ ಅವಳ ಬದುಕು ಗಾಳಿಗೆ ಸಿಕ್ಕ ತರೆಗೆಲೆಯಂತಾಯಿತು. ಸಾಯುವ ಮನಸ್ಸು ಮಾಡಿದಳು ಆದರೆ ತಾಯಿಯ ಬದುಕು ನೋಡಿ ತನ್ನ ಅಪವಾದವನ್ನು ಛಲವಾಗಿ ಸ್ವೀಕರಿಸಿದಳು. ಆಡುವ ಬಾಯಿಯನ್ನು ಮುಚ್ಚಿಸಬೇಕೆಂದು ಅವರ ಅವಮಾನದ ನುಡಿ ಲೆಕ್ಕಿಸದೆ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದಳು. ಖಂಡಿಸಿದ ತಂದೆ ಮಾತ್ರವಲ್ಲ ಈ ಸಮಾಜವನ್ನು ಎದುರಿಸಿದಳು. ಮಹಿಳಾಪರ ಹೋರಾಟಕ್ಕಾಗಿ ನಿಂತು ಎಷ್ಟೋ ನೊಂದ ಮನಸ್ಸುಗಳ ಜೊತೆಯಾದಳು. ತಾಯಿಗಾದ ಕಷ್ಟ ನೋವು ಜೊತೆ ತನ್ನ ಅನುಭವ ಅವಮಾನ ಸೇರಿಸಿ ಛಲದಿಂದ ಬದುಕಿ ಸುಂದರ ಬದುಕು ಕಟ್ಟಿಕೊಂಡಳು. ಇಂದು ಅವಳನ್ನಾಡಿದ ಅದೇ ಬಾಯಿಗಳು ತೆಪ್ಪಗಿವೆ. ಕಾರಣ ಅವಳಿಗೆ ಸತ್ಯವನ್ನು ತಿಳಿಸುವ ಧೈರ್ಯವಿದೆ. ತಾಯಿಗಾದ ನೋವು ಬೇರೆಯವರ ಬಾಳಲ್ಲಿ ಬರಬಾರದು ಎಂದು ಆಶಿಸುತ್ತಾಳೆ. ಉಮಾಳಿಗೂ ಇಂದು ತೃಪ್ತಿಯಿದೆ. ಸ್ನೇಹಾಳನ್ನು ಬೆಳೆಸಿದ ಸಾರ್ಥಕ್ಯ ಭಾವವಿದೆ. ತನ್ನಂತೆ ನೋವುಂಡ ತಾಯಿಯರಿಗೆ ಸ್ನೇಹಾಳಂತ ಮಗಳನ್ನು ರೂಪಿಸಿ ಎಂಬ ಕಿವಿಮಾತು ನೀಡುತ್ತಾಳೆ. ಇಂತಹ ನೋವುಗಳು ಎಷ್ಟೋ ಹೆಣ್ಣುಮಕ್ಕಳ ಬಾಳಲ್ಲೂ ನಡೆಯಬಹುದು ಅಲ್ಲವೇ?
ಸ್ಪಂದಿಸಿ.....ಸಹಕರಿಸಿ......ಜೊತೆಯಾಗಿ.......

ಶ್ವೇತಾಶ್ರೀ
ದ್ವಿತೀಯ ಎಂ.ಎ. 
ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017