1/21/15

ಆಕೆ ಸಿಕ್ಕಾಗ
ಅವಳು ನಡೆಯುತ್ತಿದ್ದಾಳೆ.......ಕೈಯಲ್ಲೊಂದು ಕೋಲು, ಕೆದರಿದ ಕೂದಲು, ಅಸ್ತವ್ಯಸ್ತಗೊಂಡಿರುವ ಬಟ್ಟೆ, ಕೊಳೆಗಟ್ಟಿದ ಶರೀರವನ್ನು ಮೆಲ್ಲನೆ ಎಳೆಯುತ್ತಾ ಸಾಗುತ್ತಿದ್ದಾಳೆ. ಸಿಕ್ಕವರನ್ನು ಬೈಯತ್ತಿದ್ದಾಳೆ, ಕೆಲವರನ್ನು ಮಾತಾಡಿಸುತ್ತಿದ್ದಾಳೆ. ಆದರೂ ಯಾರು ಅವಳ ಬಳಿ ಬರಲೇ ಇಲ್ಲ. ಭಯದಿಂದ ದೂರ ಸರಿಯುತ್ತಿದ್ದಾರೆ, ಓಡುತ್ತಿದ್ದಾರೆ, ಛೀ ಥೂ ಎಂದು ಉಗಿಯುತ್ತಿದ್ದಾರೆ.
ದೂರದಲ್ಲಿ ಬಸ್ಸ್ಗಾಗಿ ಗೆಳೆಯರೊಂದಿಗೆ ಕಾಯುತ್ತಿದ್ದ ಶ್ಯಾಂ ತನ್ನ ಗೆಳೆಯ ರಮೇಶನೊಂದಿಗೆ ಅವಳ ಬಗ್ಗೆ ಹೇಳಿ ಕನಿಕರ ಪಡುತ್ತಿದ್ದಾನೆ. ಚಿಕ್ಕ ಪ್ರಾಯದಲ್ಲಿಯೇ ತನ್ನ ಕಣ್ಣೆದುರು ಅನಾರೋಗ್ಯದಿಂದ ತೀರಿಕೊಂಡ ತಾಯಿಯ ಮೌಲ್ಯ ಅವನಿಗೆ ಅರಿವಾಗಿತ್ತು. ಆದರೆ ರಮೇಶ್ ಅವನ ಆಲೋಚನೆಯನ್ನು ಒಪ್ಪಲಿಲ್ಲ. ಇವನು ತನ್ನ ತಾಯಿಯನ್ನು ಕಳೆದುಕೊಂಡಿದ್ದ ಅವಳ ಯಾವ ಪ್ರೀತಿಯು ಅವನಿಗೆ ದೊರೆತಿರಲಿಲ್ಲ. ಅದರ ಅನುಭವವೂ ಅವನಿಗಿಲ್ಲ. ಕೊನೆಗೂ ಗೆಳೆಯ ಶ್ಯಾಂನ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಆ ಮುದುಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ. ಹುಡುಗರ ಆಸಕ್ತಿ ವೈದ್ಯರಿಗೂ ಖುಷಿ ನೀಡಿತು. ಅತೀ ಶೀಘ್ರದಲ್ಲಿ ಆ ವೃದ್ಧೆ ಗುಣಮುಖ ಹೊಂದಿದಳು. ಆದರೆ ಮುಂದೇನು ಎಂಬ ಪ್ರಶ್ನೆಗೆ ಶ್ಯಾಂನ ಮನೆಯೇ ದಿಕ್ಕಾಯಿತು.
ಸಮಯ ಕಳೆಯಿತು ಶ್ಯಾಂ ಮತ್ತು ರಮೇಶನಿಗೆ ಉದ್ಯೋಗ ದೊರಕಿತು. ಇಬ್ಬರೂ ತಮ್ಮ ಕಾಲ ಮೇಲೆ ನಿಂತಿದ್ದರು. ಅನಾಥನಾಗಿ ಬೆಳೆದ ರಮೇಶ ತನ್ನನ್ನು ಸಾಕಿ ಬೆಳೆಸಿದ ಅನಾಥಾಶ್ರಮಕ್ಕೆ ಬಂದು ತನ್ನ ವಿವಾಹದ ಕುರಿತಾಗಿ ಹೇಳಿಕೊಂಡಾಗ ಅಲ್ಲಿನ ಮುಖ್ಯಸ್ಥರು ಅವನನ್ನು ಆಶೀರ್ವದಿಸಿ ಅವರ ಬಳಿಯಲ್ಲಿದ್ದ ಕೆಲವು ಇವನ ಕುರಿತಾದ ದಾಖಲೆಗಳನ್ನು ಹುಡುಕಿ ಕೊಟ್ಟರು. ಅದರಲ್ಲಿ ಅವನ ಕಾಣೆಯಾದ ತಾಯಿ ತಂದೆಯರ ಭಾವಚಿತ್ರವು ಇತ್ತು. ಅದನ್ನು ನೋಡಿದವನೇ ನಿಧಿಯೊಂದು ಸಿಕ್ಕಿದವನಂತೆ ಆನಂದದ ಕಣ್ಣಿರೊಡನೆ ಶ್ಯಾಂನ ಮನೆಗೆ ಧಾವಿಸಿದ.

-ಲೋಕೇಶ್ ಕುಕ್ಕುಜೆ
ದ್ವಿತೀಯ ಎಂ.ಎ.
ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017