1/21/15

ನಮ್ಮೆದೆಯ ಕವಿತೆಗಳು
ಚಾತಕರಾಗುತ್ತಿದ್ದೀರಾ ನೀವು?
ಈ ಬೆಳಕು ಸೋರಿ ಹೋಗುತ್ತಿರುವ ದಿಗಂತದಂಚಲ್ಲಿ 
ಈ ಅಂಚಲ್ಲಿ ಕುಳಿತು-
ಆ ಕಡೆಯಿಂದಲೋ ಹುಟ್ಟಿಬಂದಾನೆನ್ನುವ ಚಂದ್ರನ 
ಕಾಯುತ್ತಿದ್ದೀರಾ ನೀವು?
ಈ ಕೆಂಪು ಹನಿಗಳ ಕುಡಿದು 
ನಾಳಿನ ಹೃತ್ಕುಕ್ಷಿಗಳಿಗೆ ನೆತ್ತರು ಚುಂಬಿಸುತ್ತ
ಬದುಕ ಮಿಡಿಸುತ್ತಿದ್ದೀರೇನು?
ನಾವೆಲ್ಲಾ ಕೇಳಲಾಗದ ಪುಟ್ಟಸ್ವರಗಳೊಡೆಯರೆ
ನೀವು ಕೂಡ ನಮ್ಮ ಹಾಗೆ 
ಈ ಕಪ್ಪು ರೆಂಬೆಗಳ ತುಂಬ ಚೈತ್ರ ತುಂಬಲಾರದವರು
ದಿನದಂತೆ ಕಂತುವ ಈ ದಿನಗಳ 
ಲಗಾಮು ಹಿಡಿದು ನಿಲ್ಲಿಸಲಾಗದವರು.
ಬದಲಾಗದಂತೆ ಕಾಣುವ ಆದರೂ 
ದಿನಾ ಬದಲಾಗುವ ಸ್ಥಿತಿಯ ಯಾಂತ್ರಿಕತೆಯಲ್ಲಿ 
ಹಳತರಿಂದ ಕಳಚಲಾಗದೆ
ಹೊಸತನವ ತಡೆಯಲಾಗದೆ
ಹೀಗೆ ಕಾಲದ ಗೋಡೆಯ ಮೇಲೆ
ಕಪ್ಪಾಗಿ ನಿಲ್ಲುವ ಚಿತ್ರಗಳು ನೀವು-
ನಮ್ಮೆಲ್ಲರ ಎದೆಯ ಕಪ್ಪು ಕವಿತೆಗಳು.
ಪದ್ಮಿನಿ
ಸಿಬ್ಬಂದಿವರ್ಗ ಮಂಗಳೂರು ವಿ.ವಿ

No comments:

Post a Comment

  ಬಿತ್ತಿ ವಿಶೇಷಾಂಕ 2017