1/21/15

ಮಾತೆ
ಓ ಮಾತೆ.......
ಇದೇಕೆ ನೀ ಹೀಗಾದೆ.....
ಇದ್ದೆನು ನಾನಂದು ಜೋತಾಡುವ ಕಬ್ಬಿಣದ ತೊಟ್ಟಿಲಲ್ಲಿ
ಕಿಲ ಕಿಲ ನಗುವ ನನ್ನ ನಗುವ ಮೋರೆಯನ್ನು ಕಂಡು 
ಬಳಿ ಬಂದುನಿಂತೆದ್ದರು ಅದೆಷ್ಟೋ ಮಂದಿ
ಕೆನ್ನೆ ಕೈಗಳ ತಟ್ಟಿ ಬಾರದ ನಗು ಬರಿಸಿ
ದೂರ ಸರಿದಿದ್ದರು ಅದೆಷ್ಟೋ ಮಂದಿ
ನನ್ನ ಮನಸ್ಸಿನ ಭಾವನೆಗಳನ್ನು ಅರಿಯದ ಜನ
ನನಗೆ ನಗುವನ್ನು ಬರಿಸಿ ಹೇಗೆ ದೂರ ಸರಿದರು.
ಸ್ವಚ್ಛಂದ ಮನದಿ ಹರುಷವ ಉಕ್ಕಿಸುವ
ನನ್ನ ಸನಿಹದಿ ಕುಳಿತಿದ್ದಳು ಆ ಮಾತೆ.
ಕೇಳಿದ್ದಳು, ಸಹಿಸಿದ್ದಳು ಎಷ್ಟೋ ಹೀನ ನುಡಿಗಳನ್ನು
ಅಂತಿದ್ದ ತಾಯಿ ಇದೇಕೆ ಹೀಗಾದಳು.
ಹೋದಲ್ಲಿ ಬಂದಲ್ಲಿ ತಪ್ಪು ಹುಡುಕುತ್ತಾ 
ಯಾರು ಮಾಡದ ಅಪರಾಧ ಮಾಡಿದೆ ಎಂಬಂತೆ....
ತಲೆಯೆತ್ತಿ ನಡೆದರೆ ತಲೆಬಾಗಿ ನಡೆವಂತೆ
ಪಿಸು ಮಾತನಾಡಿದರೆ ಮೌನಿಯಾಗಿರುವಂತೆ
ಯಾವ ಗೆಳತಿಯನ್ನು ಸೇರಲು ಬಿಡದೆ 
ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಿಡದೆ 
ಇದೆಲ್ಲವೂ ಏಕೆ? ನಾನು ಹೆಣ್ಣೆಂಬ ಕಾರಣಕ್ಕೋ?
ಮತಿಹೀನ ಜನರ ನಿಂದೆಯ ನುಡಿಗೋ?
ಪ್ರಕೃತಿಯ ವರವೋ? ಕಾಲವೋ?
ಹೆಣ್ಣಿನ ಬಾಳಿನ ಶಾಪವೋ!.
ಪ್ರವೀಣಾ ಪ್ರಜಾರಿ
ಪ್ರಥಮ ಎಂ ಎ ಕನ್ನಡ ವಿಭಾಗ
ಮುಂಜಾನೆಯಿಂದ ಮುಸ್ಸಂಜೆ
ಮುಂಜಾನೆ ಬೆಳಕು ಮೂಡಿದಾಗ
ತಂಗಾಳಿ ತಣ್ಣನೆ ಬೀಸಿದಾಗ
ಮೇಘವು ಮೆಲ್ಲನೆ ಮಳೆಯಾದಾಗ
ಚಿಗುರೆಲೆಯಲ್ಲಿ ಇಬ್ಬನಿ ನಗುವಾಗ
ಹಕ್ಕಿಗಳ ಚಿಲಿಪಿಲಿಯ ಸ್ವರ ಕೇಳಿದಾಗ
ಏಕಾಂಗಿಯಾಗಿ ನಾ ನಿಂತಿರುವಾಗ 
ನಿನ್ನ ಪ್ರೀತಿಯ ನೆನಪಾದಾಗ 
ನಿನ್ನ ನೋಡಲು ನನ್ನ ಹೃದಯ ಹಂಬಲಿಸಿದಾಗ
ಅದೇಕೋ ಕಾಣೆ ಕಣ್ಣೀರು ತುಂಬಿತು...
ಮನಸಿನ ನೋವಿನ ಮುಗಿಲು
ಕರಗಿ ಕಣ್ಣೀರಾಯಿತು...
ಮುಖದಲ್ಲೊಂದು ಹೂ ನಗು ಮೂಡಿತು...
ನನ್ನ ಕಣ್ಣಿನಿಂದ ನಿನ್ನ ರೂಪ ಮರೆಯಾದಾಗ 
ಮನದ ಮುಗಿಲು 
ಮತ್ತೊಮ್ಮೆ ಕವಿಯಿತು...
ಆ ಮುಂಜಾನೆಯು ನೋವಿನಲ್ಲಿಯೇ 
ಮುಸ್ಸಂಜೆಯತ್ತ ಸರಿಯಿತು.
ದೀಪಿಕಾ. ಎನ್. ಸಿ
ದ್ವಿತೀಯ ಎಂ ಎ ವಾಣ್ಯಿಜ್ಯ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017