1/21/15

ಸ್ನೇಹ

ಸ್ನೇಹ ಎಂಬುದು ಒಂದು ಮಧುರವಾದ ಭಾವನೆ. ಅದನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಸ್ನೇಹಕ್ಕೆ ಒಂದು ಮಹತ್ವದ ಸ್ಥಾನವನ್ನೇ ನಾವು ನೀಡಿದ್ದೇವೆ. ನಾವು ಹೆಚ್ಚಾಗಿ ಗೆಳೆಯರ ಸಾನಿಧ್ಯವನ್ನು ಬಯಸುತ್ತೇವೆ. ಅವರೊಂದಿಗೆ ಎಲ್ಲಾ ವಿಷಯಗಳನ್ನು ಹಂಚಿಕೊಂಡು ನಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇವೆ. ಸ್ನೇಹವು ಎಲ್ಲರ ಮನಸ್ಸಲ್ಲೂ ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಮುಂಜಾನೆಯ ವಾಕಿಂಗ್ ಹೋದಾಗ, ಸಂಜೆಯ ವಾಯುವಿಹಾರಕ್ಕೆ ಹೊರಟಾಗ ನಮ್ಮೊಂದಿಗೆ ಗೆಳೆಯರು ಇರಬೇಕು. ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಯಾರನ್ನಾದರೂ ರೇಗಿಸುತ್ತಾ ಕಾಲಹರಣ ಮಾಡಲು ನಮಗೆ ಬಹಳ ಖುಷಿ. ಬೆಳಗ್ಗೆ ಕಾಲೇಜಿಗೆ ಹೋಗುವಾಗಲೂ, ಸಂಜೆ ಮನೆಗೆ ಮರಳುವಾಗಲೂ ನಮ್ಮೊಂದಿಗೆ ಗೆಳೆಯರಿರಬೇಕು. ಇಂತಹ ಮಧುರವಾದ ಸಂದರ್ಭಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಗೆಳೆಯರೊಂದಿಗೆ ಐಸ್ ಕ್ರೀಂ ಪಾರ್ಲರಿಗೆ ಹೋದಾಗ ಅಥವಾ ಹೊಟೇಲಿಗೆ ಹೋಗಿ ತಮಗೆ ಇಷ್ಟವಾದ ತಿನಿಸುಗಳನ್ನು ತರಿಸಿ ಹಂಚಿ ತಿನ್ನುವುದರಲ್ಲಿ ಏನೋ ಒಂದು ಸಂತೋಷ. ಮನೆಯ ಸದಸ್ಯರೊಂದಿಗೆ ಹೇಳಿಕೊಳ್ಳಲಾಗದಂತಹ ವಿಷಯಗಳನ್ನು ಗೆಳೆಯರೊಂದಿಗೆ ಫ್ರೀಯಾಗಿ ಹೇಳಿಕೊಳ್ಳಬಹುದು. ನಮ್ಮ ಜನ್ಮದಿನ ಬಂದಾಗ ಗೆಳೆಯರಿಗೆ ಪಾಟರ್ಿ ನೀಡುವುದು, ಸಿಹಿತಿಂಡಿಗಳನ್ನು ಹಂಚಿ ಹಣವನ್ನು ನೀರಿನಂತೆ ಪೋಲು ಮಾಡಲು ಯಾವುದೇ ಬೇಸರವಿರುವುದಿಲ್ಲ. ಗೆಳೆಯರೊಂದಿಗೆ ಸ್ನೇಹ ಸಂಬಂಧ ಗಟ್ಟಿಯಾಗಿದ್ದರೆ, ಪ್ರೀತಿ, ವಿಶ್ವಾಸ ಎಂಬ ಸರಪಳಿಯಿಂದ ಬಂಧಿಯಾಗಿದ್ದರೆ ಅದನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ.
ಕ್ಲಾಸಿನಲ್ಲಿ ಪಾಠ ಮಾಡುತ್ತಿರುವಾಗ ಪಿಸುದನಿಯಲ್ಲಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಧ್ಯಾಪಕರಿಂದ ಬೈಸಿಕೊಳ್ಳುವುದು ಮರೆಯಲಾಗದ ನೆನಪು. ಸ್ಪೆಷಲ್ ಕ್ಲಾಸ್ ಇದೆಯೆಂದು ಹೇಳಿ ರಜಾದಿನಗಳಲ್ಲಿ ಗೆಳೆಯರೊಂದಿಗೆ ತಿರುಗಾಡಲು ಹೋಗಿ, ಅದು ಮನೆಯಲ್ಲಿ ಗೊತ್ತಾಗಿ ಅಪ್ಪ ಅಮ್ಮನಿಂದ ಬೈಸಿಕೊಂಡ ಸಂದರ್ಭಗಳು ಹಲವು. ಕಾಲೇಜುಗಳಲ್ಲಿ ಪ್ರೀತಿ ಮೊಳೆತಾಗ ಮೊದಲು ನಾವು ಹೇಳಿಕೊಳ್ಳುವುದು ನಮ್ಮ ಆಪ್ತ ಸ್ನೇಹಿತರಲ್ಲಿ, ಅದೇ ರೀತಿ ಪ್ರೀತಿ ಒಡೆದಾಗ ಆ ವೇದನೆಯನ್ನು ಹೇಳಿಕೊಳ್ಳುವುದು ನಮ್ಮ ಆಪ್ತರಲ್ಲಿಯೇ. ಮನೆಕೆಲಸ ಮಾಡದಿದ್ದಾಗ, ಅಸೈನ್ಮೆಂಟ್ಸ್ ಬರೆಯದಿದ್ದಾಗ ನಮಗೆ ಸಹಾಯ ಮಾಡಲು ಇರುವವರು ನಮ್ಮ ಸ್ನೇಹಿತರೇ ಹೀಗೆ ಒಂದಲ್ಲ ಒಂದು ಕಾರಣಕ್ಕೆ ನಾವು ಸದಾ ನಮ್ಮ ಸ್ನೇಹಿತರನ್ನು ಅವಲಂಬಿಸಿರುತ್ತೇವೆ. ಸ್ನೇಹಕ್ಕೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಹಿರಿಯರು- ಕಿರಿಯರು, ಶ್ರೀಮಂತ-ಬಡವ, ಗಂಡು-ಹೆಣ್ಣು ಎಂಬ ಯಾವುದೇ ಭೇದವಿಲ್ಲ.
ಸಂತೋಷವಾದಾಗಲೂ ದುಃಖವಾದಾಗಲೂ ನಾವು ಮೊದಲು ಗೆಳೆಯರಲ್ಲಿ ಅದನ್ನು ಹೇಳಿಕೊಳ್ಳಲು ಇಚ್ಛಿಸುತ್ತೇವೆ. ನಮಗೆ ಸ್ನೇಹಿತರು ಹಲವರು ಇರಬಹುದು ಆದರೆ, ನಮ್ಮ ಎಲ್ಲಾ ವಿಷಯಗಳನ್ನು ಎಲ್ಲರಲ್ಲೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನಾವು ನಮಗೆ ಆಪ್ತರೆನಿಸಿದ ಒಬ್ಬರು ಅಥವಾ ಇಬ್ಬರಲ್ಲಿ ಮಾತ್ರ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ. ಸ್ನೇಹಿತರನ್ನು ಆರಿಸಿಕೊಳ್ಳುವಾಗ ನಾವು ತುಂಬ ಜಾಗೃತರಾಗಿರಬೇಕು. ಸ್ನೇಹಿತ ವರ್ಗದಲ್ಲೂ ಮೋಸ- ಕಪಟ ಮಾಡುವವರು ಇರುತ್ತಾರೆ. ಆದಷ್ಟು ಅವರಿಂದ ದೂರವಿರಲು ಪ್ರಯತ್ನಿಸಬೇಕು. ಈಗಿನ ಕಾಲದಲ್ಲಂತೂ ಒಬ್ಬ ಒಳ್ಳೆಯ ಸ್ನೇಹಿತೆ/ಸ್ನೇಹಿತನನ್ನು ಪಡೆಯಲು ತುಂಬಾ ಕಷ್ಟ. ನಮ್ಮ ಆಪ್ತ ಸ್ನೇಹಿತರಲ್ಲಿ ನಾವು ತುಂಬಾ ನಂಬಿಕೆ ವಿಶ್ವಾಸವನ್ನು ಇಟ್ಟಿರುತ್ತೇವೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಜೀವನದುದ್ದಕ್ಕೂ ನಾವು ಸ್ನೇಹಿತರನ್ನು ಬಯಸುತ್ತಲೇ ಇರುತ್ತೇವೆ. ನಾಲ್ಕಾರು ಜನರಿಲ್ಲದಿದ್ದರೂ ಅಟ್ಲೀಸ್ಟ್ ಒಬ್ಬ. ಸ್ನೇಹಿತೆ/ಸ್ನೇಹಿತನಾದರೂ ನಮಗಿರಲೇ ಬೇಕು.

ಚೇತನಾ. ಎಚ್. ಆರ್.
ಪ್ರಥಮ ಎಂ. ಎ. 
ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017