10/17/14

  ಶಾಪ


ದೈವದ ಎದುರು ನೀನು ಮಾತನಾಡಿದರೆ ಅದರ ಶಾಪ ಸಿಗದೆ ಇರಲಾರದು. ಇಡೀ ಊರಿನ ಜನರು ಅಷ್ಟೇಕೆ ಪರ ಊರಿನವರು ಕೂಡ ತಲೆತಲಾಂತರದಿಂದ ನಂಬಿಕೊಂಡು ಬಂದಿರುವ ದೈವಕ್ಕೆ ನೀನು ಎದುರು ಮಾತನಾಡುವುದೆ? ದೈವವೆಂದರೆ ಏನೆಂದು ತಿಳಿದಿದ್ದೀ? ಅದರ ಕೋಪದ ಉರಿಗೆ ಸಿಲುಕಿದರೆ ಪರಿಣಾಮ ಏನಾಗುತ್ತದೆ ಎಂದು ಬಲ್ಲೆಯ?. ಅದು ನಿನಗೆ ತಿಳಿದಿಲ್ಲವೆಂದರೆ ಹಿರಿಯರಲ್ಲಿ ಕೇಳಿ ತಿಳಿದುಕೋ, ಸಾಧ್ಯವಿಲ್ಲವೆಂದಾದರೆ ದೈವದ ಕೋಪದ ಪ್ರಭಾವ ಎಷ್ಟು ಅನ್ನುವುದನ್ನು ಅನುಭವಿಸಿ ನೋಡು. ಆಗ ನಿನಗೆ ಮಾತ್ರ ಯಾಕೆ ಎಲ್ಲರಿಗೂ ಅರ್ಥವಾಗುತ್ತದೆ.

ಹೌದು ನೀವು ಹೇಳುವ ಕಥೆಯನ್ನು ಕೇಳಲು ಈ ಊರಿನ ಜನರೆಲ್ಲರು ದಡ್ಡರಲ್ಲ. ನಮ್ಮ ತಲೆಗಳಲ್ಲಿ ಸಗಣಿ ತುಂಬಿಕೊಂಡಿದ್ದೇವೆ ಎಂದು ಭಾವಿಸಿದ್ದಿರೊ, ನಿಮ್ಮ ಕೆಟ್ಟ ಕೆಲಸಗಳು ಇಲ್ಲಿ ಯಾರಿಗೂ ತಿಳಿಯುವುದಿಲ್ಲವೆಂದು ನೀವು ನಂಬಿದ್ದರೆ ಅದು ನಿಮ್ಮ ಮೂರ್ಖತನವಷ್ಟೆ. ನಮ್ಮ ರೀತಿಯಲ್ಲಿ ಕೂಲಿ ಮಾಡುವವರೆಲ್ಲರು ಕೈಲಾಗದವರೆಂದು, ವಿದ್ಯೆ ಇಲ್ಲದವರೆಲ್ಲರೂ  ಬುದ್ಧಿ ಇಲ್ಲದವರೆಂದು ತಿಳಿದು ಎಲ್ಲರು ನಿಮ್ಮ ಅಡಿಯಾಳುಗಳೆಂದು ತಿಮರ್ಾನಿಸಿದರೆ ಮರೆತು ಬಿಡಿ. ನೀವು ಕೇವಲ ದೇವರು ದೈವ ಭೂತ ಎಂದು ಹೇಳಿ ಜನರನ್ನು ನಂಬಿಸುತ್ತೀರೇನೋ ಸರಿ. ಆದರೆ ನಾವು ದೇವರು ಮಾತ್ರವಲ್ಲ ಅದರೊಂದಿಗೆ ಅತ್ಮಸಾಕ್ಷಿಯನ್ನು ನಂಬುವವರು. ಒಳ್ಳೆಯ ಕೆಟ್ಟವುಗಳ, ಸರಿ ತಪ್ಪುಗಳ ಅರಿವು ನಮಗೂ ಇದೆ. ಇಷ್ಟಕ್ಕೂ ದೇವರು ಮೆಚ್ಚುವುದಾದರು ಏನನ್ನು? ಶ್ರೀಮಂತಿಕೆಯನ್ನೊ ಅಥವಾ ಹೃದಯವಂತಿಕೆಯನ್ನೊ? ಜನರ ಬೆವರಿನ ಸುಲಿಗೆಯ ಹಣದಿಂದ ಯಾರು ಉದ್ಧಾರವಾಗಲು ಸಾಧ್ಯವಿಲ್ಲ. ಅದರಿಂದ ಬರುವ ವೈಭವಗಳು ಅಲ್ಪದಿನವಷ್ಟೆ. ಅವರು ದುಃಖದಿಂದ ಮೈ ಮುರಿದು ಸಂಪಾದಿಸಿದ ಹಣ ಅದು ಕೇವಲ ಹಣವಲ್ಲ ಅದು ರಕ್ತದ ಬೆವರು. ಅದನ್ನು ಸಹ ದೇವರು ದೈವದ ಹೆಸರಿನಲ್ಲಿ ಬಲವಂತವಾಗಿ ಕಿತ್ತುಕೊಂಡರೆ ಅದು ನಿಮಗೆ ಅವರು ಕೊಡುವ ದೇಣಿಗೆಯಲ್ಲ ಶಾಪವಷ್ಟೆ. ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಹಣ ಹಣವೆಂದು ನಮ್ಮನ್ನು ಪೀಡಿಸಿದರೆ ಹೇಗೆ ಕೊಡಲು ಸಾಧ್ಯ? ನಂಬಿರುವ ದೇವರಿಗೇನೂ ನಮ್ಮ ಕಷ್ಟಗಳು ಅರ್ಥವಾಗುವುದಿಲ್ಲವೆಂದೊ? ನಂಬುವ ದೇವರ ಮೇಲಿರುವ ಭಯಕ್ಕಿಂತಲು ನಿಮ್ಮ ಮೇಲಿರುವ ಭಯವೇ ಈ ಊರಿನ ಜನಕ್ಕೆ ಹೆಚ್ಚು. ನೀವೇನು ದೇವತಾ ಮನುಷ್ಯರೊ, ಮೂರು ತಲೆಮಾರಿಗೆ ಕೂತು ಉಣ್ಣುವಷ್ಟು ಕೂಡಿಸಿಟ್ಟದನ್ನು ಕೊಟ್ಟುಬಿಡಿ ದೇವರಿಗೆ. ದೈವವೇನು ಬೇಡವೆನ್ನುವುದೊ. ಗಮನವಿಟ್ಟು ಕೇಳಿ ಇನ್ನೂ ಮುಂದೆ ಯಾವುದೇ ದೈವ ದೇವರುಗಳ ಕಾರ್ಯಗಳಿಗೆ ನಾನು ಮಾತ್ರವಲ್ಲ, ಈ ಊರಿನ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಕೊಡಲು ಸಾಧ್ಯ. ಅಷ್ಟುಕೊಡಿ, ಇಷ್ಟು ಕೊಡಿ ಸಾಲುವುದಿಲ್ಲವೆಂಬ ಮಾತು ಮುಂದೆ ನಮ್ಮ ಜನರೆದುರು ಬರಬಾರದು. ಇದೇ ಕೊನೆ.

ಹೀಗೆ ಮಾತಿಗೆ  ಮಾತು ಬೆಳೆದು ತರ್ಕಗಳು ತಾರಕಕ್ಕೇರುತ್ತಿದ್ದವು. ಊರಿನ ಭೂತದ ದೈವ ದೇವರುಗಳ ದೈವಸ್ಥಾನದ ಆಡಳಿತ ಮುಖ್ಯಸ್ಥನೂ, ಊರಿನ ಶ್ರೀಮಂತನೂ ಆಗಿರುವ ಭವಾನಿ ಶೆಟ್ಟರಿಗೂ, ಸಾಧಾರಣ ನಾಲ್ಕು ಮನೆಗಳ ತೋಟಗಳಲ್ಲಿ ದುಡಿದು ಯಾರೋ ನೀಡಿರುವ ತುಂಡು ಗೇಣಿಯ ಜಾಗದಲ್ಲಿ ಕೂಲಿ ನಾಲಿ ಮಾಡಿ ಬದುಕು ಸಾಗಿಸಲು ಹೆಣಗಾಡುತ್ತಿರುವ ಭೋಜನಿಗೂ ದೈವಕ್ಕೂ ಹಾಗೂ ಅದರ ಜಾತ್ರಗೆ ಬೇಕಾದ ಖಚರ್ುವೆಚ್ಚಗಳಿಗಾಗಿ ವಂತಿಗೆ ನೀಡಬೇಕಾದ ಹಣದ ಕುರಿತು ಬಿಸಿ ಬಿಸಿಯಾಗಿ ವಾದ ವಿವಾದಗಳೊಂದಿಗೆ ಚಚರ್ೆಯಾಗುತ್ತಿತ್ತು. ಕರಾವಳಿ ತೀರದ ಜನರ ಬದುಕು ಹಲವಾರು ವೈವಿದ್ಯಗಳೊಂದಿಗೆ ಹಾಸುಹೊಕ್ಕಾಗಿದೆ. ಮೊಗವೀರರ ಬದುಕು ಮೀನು ಹಿಡಿಯುವುದರ ಮೂಲಕ ಸಮುದ್ರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರೆ, ವ್ಯವಸಾಯದಲ್ಲಿ ಮೊಯ್ಲಿ, ಪೂಜಾರಿ, ಮೂಲ್ಯರು, ಬ್ರಾಹ್ಮಣ, ಜೈನ, ಶೆಟ್ಟಿ, ಗೌಡ, ಕ್ರೈಸ್ತ ಮತ್ತು ಮುಸಲ್ಮಾನ ಹೀಗೆ ಒಬ್ಬರಿಗೊಬ್ಬರು ಆಧರಿತರಾಗಿ ಜೀವನ ನಡೆಸುವುದು ಇಲ್ಲಿಯ ವಿಶೇಷತೆಯೇ ಅಗಿದೆ . ಕೆಲವೊಂದು ವಿಷಯಗಳು ಮನುಷ್ಯರನ್ನು ತನ್ನ ಮಾನವ ಚೌಕಟ್ಟಿನ ವಲಯದಿಂದ ಮಾನವೀಯತೆ ಮೀರಿ ವತರ್ಿಸುವಂತೆ ಮಾಡುವುದು ವಿಪಯರ್ಾಸವಾಗಿದೆ. ದೇವರು ಎಂಬ ಹೆಸರಿನಲ್ಲಿ ಪ್ರಪಂಚದಲ್ಲಿ ಈವರೆಗೆ ಸುರಿದಷ್ಟು ರಕ್ತ ಪ್ರಾಯಶಃ ಬೇರೆ ಯಾವುದೆ ಕಾರಣಕ್ಕೂ ಸುರಿದಿರಲಾರದು. ಮನುಷ್ಯನ ಇನ್ನೂ ಬೇಕೆಂಬ ಬಯಕೆಯು ಎಲ್ಲೆ ಮೀರಿದಾಗ ಮಾನವ ಸಂಬಂಧಗಳನ್ನು ಮುರಿಯಲು ಹೇಸಲಾರ.

ಕರಾವಳಿಯ ಜನರಲ್ಲಿ ದೈವ ನಂಬಿಕೆಯೇ ಪ್ರಧಾನ,ಹಲವಾರು ದೈವ ದೇವರುಗಳ ಗುಡಿಗಳು, ಚಾವಡಿಗಳು, ಜೀಣರ್ೋದ್ಧಾರ ಹೊಂದಿವೆ. ಜಾತ್ರೆಗಳು, ಸಾಂಸ್ಕ್ರತಿಕ ಆಚರಣೆಗಳು ವಿಜೃಂಭಿಸುತ್ತಾ ಬರುತ್ತಿವೆ. ಇಂತಹ ಒಂದು ಗುತ್ತಿನ ಮನೆತನದಲ್ಲಿ ಶ್ರಿಮಂತಿಕೆಯನ್ನು ಹೊಂದಿರುವ ಜನರಲ್ಲಿಭವಾನಿ ಶೆಟ್ಟರು ಒಬ್ಬರು. ನ್ಯಾಯ ಹೇಳುವುದಕ್ಕೆ, ಒಕ್ಕಲು ಕೂರಿಸುವುದಕ್ಕೂ ಏಳಿಸುವುದಕ್ಕೂ ಹೆಸರುವಾಸಿಯಾದವರು. ಶೆಟ್ಟರೆಂದರೆ ಸಾಕು ಊರೇ ನಡುಗುತ್ತಿತ್ತು. ಎದುರು ಮಾತನಾಡುವ ಒಬ್ಬನಿಗೂ ಉಳಿಗಾಲವಿಲ್ಲ. ಒಕ್ಕಲಿನ ಆಳಾಗಿರಲಿ, ಪಟೇಲರ ಬಂಟನೇ ಅಗಿರಲಿ ಎರಡು ಒಂದೆ. ಊರಿನ ಜನರಿಗೆ ಶೆಟ್ಟರ ಮಾತೆ ವೇದವಾಕ್ಯ. ಪ್ರಶ್ನಿಸುವ ಧೈರ್ಯ ಒಬ್ಬನಿಗೂ ಇಲ್ಲ. ಹೆಚ್ಚಾಗಿ ಅವಿದ್ಯಾವಂತರಿರುವ ಊರು ಅದು. ಆದರೆ ಭೋಜ ಕೂಲಿನಾಲಿ ಮಾಡಿ ಶಾಲೆಗೆ ಹೋಗಿ ನಾಲ್ಕನೆ ಕ್ಲಾಸು ಪಾಸುಮಾಡಿದ್ದ. ಮೊದಲೆ ಅವಿದ್ಯಾವಂತರಿರುವ ಹಳ್ಳಿಯದು. ಇನ್ನೂ ದೇವರ ಹೆಸರಿನಲ್ಲಿ ಹಣ ಮಾಡುವುದೆಂದರೆ ಅದನ್ನು ಕೇಳಬೇಕೆ. ವಿದ್ಯಾವಂತರಿಗೆ ವಿಚಾರಶೀಲತೆ ಇಲ್ಲವೆಂದಮೇಲೆ ಇನ್ನೂ ಅವಿದ್ಯಾವಂತರು ವಿಮಶರ್ಿಸಲು ಹೇಗೆ ಸಾಧ್ಯ? ದೈವದ ಭಯವು ಅವರನ್ನು ಹೆದರಿಸದೆ ಬಿಟ್ಟೀತೇ. ಹಳ್ಳಿಯ ಜನರೆಂದ ಮೇಲೆ ಗುತ್ತಿನ ಶೆಟ್ಟರು ಬಿಡುವುದುಂಟೆ? ಅದರು ಕೆಲವರು ಪ್ರಶ್ನೆಮಾಡುತ್ತಾರೆ. ಶೆಟ್ಟರು ಆಗರ್ಭ ಶ್ರೀಮಂತರಾದ ಕಾರಣ ಊರಿನ ಎಲ್ಲಾ ಧಾಮರ್ಿಕ ಉಸ್ತುವಾರಿಯ ಹೊಣೆ ಅವರೆ ಹೊರುತ್ತಿದ್ದರು. ಲಾಭವಿಲ್ಲದೆ ಹೊಣೆ ಹೊತ್ತುಕೊಳ್ಳುವ ಜಾಯಮಾನ ಶೆಟ್ಟರದಲ್ಲ. ಅವರ ಎಲ್ಲಾ ವಿಚಾರಗಳನ್ನು ಒಕ್ಕಲಿನ ಮೋಂತುವನ್ನು ಕೇಳಿದರೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾನೆ.

  ಊರಿನ ಜಾತ್ರೆಗೆ ಇನ್ನೂ ಎರಡು ದಿನಗಳಷ್ಟೆ ಬಾಕಿ ಉಳಿದಿತ್ತು, ಅದರ ಭರ್ಜರಿ ತಯಾರಿಗಾಗಿ ಜಾತ್ರೆ ನಡೆಯುವ ಮೈದಾನದ ಸುತ್ತಲು ಕಂಬಗಳನ್ನು ನೆಡಲಾಗಿತ್ತು. ಮೈದಾನದ ಇಕ್ಕೆಲಗಳಲ್ಲಿ ನಾಯಿ ಕೊಡೆಗಳಂತೆ ಚಿಕ್ಕ ಪುಟ್ಟ ಅಂಗಡಿಗಳು ವ್ಯಾಪಾರಕ್ಕೆ ಸಜ್ಜುಗೊಳ್ಳುತ್ತಿದ್ದವು. ಒಕ್ಕಲ ಮಕ್ಕಳು ಸಹ ಜಾತ್ರೆಗಾಗಿ ಮೈ ಮರಿದು ದುಡಿಯುತ್ತಿದ್ದರು. ಈ ಬಾರಿ ಹೆಚ್ಚು ಜನರು ಬಾಗವಹಿಸುವ ನಿರೀಕ್ಷೆ ಶೆಟ್ಟರದು. ಬಂದ ದೇಣಿಗೆಯನ್ನು ಲೆಕ್ಕ ಹಿಡಿದರೆ ಮೂರು ಜಾತ್ರೆಯನ್ನು ನಡೆಸಬಹುದಿತ್ತು. ಶೆಟ್ಟರ ಗುಟ್ಟು ಪ್ರಶ್ನಿಸುವಂತಿಲ್ಲ, ಉಳಿಗಾಲವು ಇಲ್ಲ. ಇತ್ತ ಕಡೆ ಮೈ ಬಾಗಿಸಿ ದುಡಿದರೆ ಮಾತ್ರ ಉದರ ತಂಪಾಗಿಸಲು ಸಾಧ್ಯ ಎನ್ನುವ ದಿನಚರಿ ಭೋಜನದು. ಎಂದಿನಂತೆ ಅಂದು ಸಹ ಮಗಳು ಜಲಜಳನ್ನು ಹೆಗಲ ಮೇಲೆ ಕೂರಿಸಿ ಮೂರು ಸುತ್ತು ಹೊಡೆದು ಆಕೆಯೊಡನೆ ಸ್ವಲ್ಪ ಸಮಯವನ್ನು ಕಳೆದು ಮಡದಿ ಸರಸು ಕಟ್ಟಿಕೊಟ್ಟ ಬುತ್ತಿಯ ಗಂಟನ್ನು ಕೈಯಲ್ಲಿ ಹಿಡಿದು ತೋಟದ ಕೆಲಸಕ್ಕೆ ಭಟ್ಟರ ಮನೆಗೆ ಹೊರಟು ಹೋದ .ದಾರಿ ಮಧ್ಯದಲ್ಲಿ ಗುತ್ತಿನ ಶೆಟ್ಟರ ನಂಬಿಕೆಯ ಆಳು ಶಿವ ಸಿಕ್ಕಿ ಮಾತನಾಡುತ್ತಾ " ನಿನ್ನ ಕುರಿತಾಗಿ ಗುತ್ತಿನ ಶೆಟ್ಟರು ಏನೋ ಗೌಪ್ಯವಾಗಿ ಚಚರ್ಿಸುತ್ತಿದ್ದಾರೆಂದು" ಹೇಳಿದ. ಭೋಜ ಮಾತ್ರ ಶಿವನ ಮಾತಿಗೆ ತಲೆ ಕೆಡಿಸಿಕೊಳ್ಳದೆ ದೈವವು ಕಾಪಾಡುತ್ತದೆ ಎನ್ನುವ ಹುಚ್ಚು ಧ್ಯೆರ್ಯದಿಂದ ಹೊರಟುಹೋದ. ಶೆಟ್ಟರ ಮನೆಯಲ್ಲಿ  ಜಾತ್ರೆಗೆ ಭಾರೀ ತಯಾರಿಗಳು ಭರಾಟೆಯಿಂದ ನಡೆಯುತ್ತಿತು. ಮನೆಯ ಆಳುಗಳು ಇರುವೆಗಳಂತೆ ಅತ್ತಿಂದಿತ್ತ ಓಡಾಡುತ್ತಾ ಇದ್ದರು. ಭೋಜನ ಮನೆಯಲ್ಲಿಯು ಇದೆ ಸ್ಥಿತಿ. ಹೆಂಡತಿ ಸರಸು ಬೆಳಗಿನಿಂದಲೆ ಮನೆಯನ್ನು ಶುಚಿಗೊಳಿಸಿ ಪಾತ್ರೆಗಳನ್ನು ಬೆಳಗಿಸಿ ಒಪ್ಪವಾಗಿ ಜೋಡಿಸಿಟ್ಟಳು. ಮನೆಯ ಅಂಗಳವನ್ನು ಗುಡಿಸಿ,ಸಗಣಿ ಸಾರಿಸಿ ಅಂದವಾಗಿಸಿದಳು. ಸಂಜೆಯಾದದ್ದು ತಿಳಿಯದೆ ಹೋದಾಗ ಹೊತ್ತು ಮೀರಿ ಸೂರ್ಯ ಪಡುವಣದ ಕಡೆಗೆ ಹೊರಟು ಹೋದ.

  ಸೂರ್ಯನೇನೊ ಪಡುವಣಕ್ಕೆ ಸಾಗಿ ಮನೆ ಸೇರಿದ. ಅದರೆ ಕಿಟ್ಟುಭಟ್ಟರ ಮನೆಗೆ ಕೆಲಸಕ್ಕೆ ಹೋದ ಭೋಜ ಮಾತ್ರ ಇನ್ನೂ ಮರಳಿ ಗೂಡು ಸೇರಿರಲಿಲ್ಲ. ಅವನೆಂದೂ ಅಷ್ಟು ತಡವಾಗಿ ಮನೆ ಸೇರುವವನಲ್ಲ. ಕೆಲಸಕ್ಕೆ ಹೋದ ಪತಿ ಸಂಜೆ ಕಳೆದು ರಾತ್ರಿಯಾದರೂ ಮನೆ ತಲುಪದಿರುವುದನ್ನು ಕಂಡು ಮಡದಿ ಸರಸು ಗಾಬರಿಗೊಂಡಳು. ಪಕ್ಕದ ಕೆಲವು ಒಕ್ಕಲುಗಳಲ್ಲಿಯು ವಿಚಾರಿಸಿದಳು. ರಾತ್ರಿಯಿಡಿ ಕಾದರೂ ಅವನು ಬರುವ ಯಾವ ಸುಳಿವು ಇರಲಿಲ್ಲ.ಮಗಳು ಜಲಜಳನ್ನು ಎತ್ತಿಕೊಂಡು ನಸು ಬೆಳಕಿನಲ್ಲಿಯೆ ಕಿಟ್ಟು ಭಟ್ಟರ ಮನೆ ತಲುಪಿದಳು. ಭಟ್ಟರನ್ನು ಕೇಳಿದರೆ ಭಟ್ಟರದ್ದು ಒಂದೆ ಉತ್ತರ." ಅಂವ ನೆನ್ನೆ ಸಾಯಂಕಾಲವೆ ಕೆಲ್ಸ ಮುಗ್ಸಿ ಹೋದ". ಎಲ್ಲಿಗೆ ಹೋಗಿರಬಹುದೆಂಬುದು ಸರಸುವಿಗೂ ಯಕ್ಷಪ್ರಶ್ನೆಯಾಗಿತ್ತು.

   ಭೋಜ ಕಾಣೆಯಾದ ಸುದ್ದಿ ಇಡೀ ಊರಿಗೆ ಕಾಡ್ಗಿಚ್ಚಿನಂತೆ ಹರಡಿತು. ಜನರು ಭಾರಿ ಅತಂಕಕ್ಕಿಡಾದರು, ಹಳ್ಳಿಯ ಹುಡುಗರೆಲ್ಲರು ಒಟ್ಟಾಗಿ ತೋಟ, ಗುಡ್ಡ, ಹಳ್ಳ, ಗದ್ದೆ ಹೀಗೆ ಎಲ್ಲಾ ಕಡೆ ಹುಡುಕತೊಡಗಿದರು. ಸುತ್ತ -ಮುತ್ತಲ ಹಳ್ಳಿಗಳಿಗೂ ಹೇಳಿ ಕಳುಹಿಸಿದರು. ಅದರೆ ಯಾವ ಕಡೆಯಿಂದಲು ಪ್ರತಿಕ್ರಿಯೆ ಬರಲಿಲ್ಲ. ಭೋಜನ ಸುಳಿವು ಸಿಗಲಿಲ್ಲ. ಸಂಜೆಯ ಸಮಯ ಭೋಜ ಕಾಣೆಯಾದ ಬಗ್ಗೆ ಚಚರ್ೆಮಾಡುತ್ತಾ ಜಾತ್ರೆಯ ಕೊನೆಯ ದಿನದ ತಯಾರಿಯ ಕೆಲಸ ಮುಗಿಸಿ ನಾಲ್ಕೈದು ಜನರು  ನಡೆದು ಬರುತ್ತಿದ್ದರು. ಅವರು ಹೆಚ್ಚೇನು ದೂರ ಬಂದಿರಲಿಲ್ಲ. ಜಾತ್ರಯ ಸ್ಥಳದಿಂದ ಕೂಗಳತೆಯ ದೂರವಿರಬಹುದು, ಅಷ್ಟರಲ್ಲಿಯೇ ಅವರಲೊಬ್ಬ ಅದು ನಮ್ಮ ಭೋಜನಲ್ಲವೆ ಎಂದು ಕಿರುಚಿ ಹೇಳಿದಾಗ ಎಲ್ಲರು ಗಾಬರಿಯಿಂದ ಆ ಕಡೆ ನೋಡಿದರು. ಇವರ ಸದ್ದು ಗದ್ದಲಕ್ಕೆ ಅಕ್ಕ ಪಕ್ಕದ ಮನೆಯವರು ಓಡಿ ಬಂದರು. ಊರಿನ ದೈವದ ಜಾತ್ರೆ ನಡೆಯುವ ಮೈದಾನದ ಬದಿಯ ದೊಡ್ಡ ಹಲಸಿನ ಮರದಡಿಯಲ್ಲಿ ಭೋಜ ಅನಾಥ ಹೆಣವಾಗಿ ಬಿದ್ದಿದ್ದ. ಮೂಗಿನ ಹೊಳ್ಳೆಗಳಿಂದ ರಕ್ತ ಜಿನುಗಿ ಗಟ್ಟಿಯಾಗಿತ್ತು. ಕಿವಿಗಳಿಂದ ರಕ್ತ ಸೋರಿದ್ದು, ಅದೋ ಕಣ್ಣು ನೋಡು ನೀಲಿ ಬಣ್ಣಕ್ಕೆ ತಿರುಗಿದೆ, ಹೀಗೆ ಬಂದವರೆಲ್ಲರು ಹೆಣದ ಕುರಿತಾಗಿ ಒಂದೊಂದಾಗಿ ಮಾತನಾಡಲು ಪ್ರಾರಂಭಿಸಿದರು.

  ಸುದ್ದಿ ಮುಟ್ಟಿ ಮಗಳೊಡನೆ ಓಡೋಡಿ ಬಂದ ಸರಸುವಿಗೆ ಕಾಣ ಸಿಕ್ಕಿದ್ದು ಗಂಡನ ಆನಾಥ ಶವ. ಮಗಳು ಮಾತ್ರ ಯಾವುದರ ಪರಿವೆ ಇಲ್ಲದೆ ಆಸರೆಯೊಂದನ್ನು ಕಳೆದುಕೊಂಡದರ  ದುಃಖವಿಲ್ಲದೆ ಕುತೂಹಲದಿಂದ ನೋಡುತ್ತಾ ಮೌನಿಯಾಗಿದ್ದಳು. ಭೋಜ ಸತ್ತರೇನಂತೆ ಜಾತ್ರೆ ನಿಲ್ಲುವುದೆ! ಜೀವ ಇರುವವರು ಜೀವನ ನಡೆಸಬೇಕಲ್ಲವೆ, ಅವನ ಭೀಕರ ಸಾವು ಜನರಲ್ಲಿ ದೈವದ ಭಯವನ್ನು ಹೆಚ್ಚಾಗಿಯೇ ಮೂಡಿಸಿತು. ಅಂದು ಜಾತ್ರೆಗೆ ಹಿಂದೆಂದಿಗಿಂತಲು ಬಹುಸಂಖ್ಯೆಯಲ್ಲಿ ಜನರು ಸೇರಿದ್ದರು.  ಜಾತ್ರೆಯ ತುಂಬಾ ಬಾರಿ ಗುಸು ಗುಸು ಮಾತು ಕೇಳಿ ಬರುತ್ತಿತ್ತು. ಜನರು ಅಲ್ಲಲ್ಲಿ ಗುಂಪು ಸೇರಿ ಚಚರ್ಿಸುತ್ತಿದ್ದರು. ಅದರೆ ಗುತ್ತಿನ ಶೆಟ್ಟರು ಮಾತ್ರ ಯಾವ ಬೇಸರವು ಇಲ್ಲದೆ ಲಗು- ಬಗೆಯಿಂದ ಓಡಾಡುತ್ತಿದ್ದರು. ಮೀಸೆಯಡಿಯ ನಗು ಅಂದು ತನ್ನ ರಂಗನ್ನು ಹೆಚ್ಚಿಸಿತ್ತು. ಜಾತ್ರೆಗೆ ಬಂದ ಪ್ರತಿಯೊಬ್ಬನ ಬಾಯಲ್ಲು ಒಂದೆ ಮಾತು " ಭೋಜ ದೈವದ ಶಾಪಕ್ಕೆ ಸತ್ತನಂತೆ! " ದೈವದ ಎದುರಿಗೆ ಮಾತನಾಡಿದವನಿಗೆ ಉಳಿವುಂಟೋ? ಎಂದು ಮಾತನಾಡುತ್ತಿದ್ದರೆ ಶೆಟ್ಟರ ಮುಖದಲ್ಲಿ ಮತ್ತೆ ಮತ್ತೆ ಮಿಂಚಿನ ನಗೆಯೊಂದು ಮೂಡಿ ಮರೆಯಾಗುತ್ತಿತ್ತು.


ಕರಾವಳಿ ಲೇಖಕಿಯರ-ವಾಚಕಿಯರ ಸಂಘದ 2014ರ ಬಹುಮಾನಿತ ಕಥೆ.
ಲೋಕೇಶ್ ಕುಕ್ಕುಜೆ
ದ್ವಿತೀಯ ಎಂ ಎ (ಕನ್ನಡ )






No comments:

Post a Comment

  ಬಿತ್ತಿ ವಿಶೇಷಾಂಕ 2017