1/21/15

ಸುಮ್ಮನೆ ಬರೆದುಕೊಂಡದ್ದು..!
ಚುಮು ಚುಮು ಚಳಿಯ ಮುಂಜಾವಿನಲ್ಲಿ ಸಾವಿನಂತ ನಿದ್ದೆಯಲ್ಲೂ ಅದೊಂದು ಹಾಳು ಕನಸು ಬೀಳದಿದ್ದರೆ ಎಚ್ಚರಗೊಳ್ಳುತ್ತಿರಲಿಲ್ಲವೇನೋ? ಕಣ್ಣು ಬಿಟ್ಟರೆ ಹಗ್ಗದಲ್ಲಿ ನೇತಾಡುತ್ತಾ ಮತ್ತೊಂದು ದಿನವನ್ನು ಹತ್ಯೆಮಾಡಲು ಕಾಯುತ್ತಿರುವ ಕ್ಯಾಲೆಂಡರ್! ಅದಾಗಲೇ ಮಸಣದಲ್ಲಿ ಉರಿಯುವ ಬೆಂಕಿಯಂತ ಈ ಹಾಳು ಸೂರ್ಯನಿಗೆ ಹಲ್ಲುಜ್ಜದ ಎಂಜಲು ಉಗಿಯಬೇಕೆನ್ನುವಷ್ಟರಲ್ಲಿ ಅಮ್ಮನ ಮಾಮೂಲು ಸುಪ್ರಭಾತ. ಅಪ್ಪನದ್ದು ಮಿಲಿಟ್ರಿ ನಡಿಗೆ. ಇನ್ನು ತಂಗಿಯದ್ದು ಜಾತ್ರೆಯ ಅಂಗಡಿಗಳ ಸಾಲು ನೆನಪಿಸುವ ಮೇಕಪ್ಪು! ಇವಿಷ್ಟನ್ನು ಹೊಂದಿಸಿಕೊಂಡು ಹೊರಡುವಷ್ಟರಲ್ಲಿ ಅರ್ಧ ಸುಟ್ಟ ಹೆಣದಂತೆ ಹಳತಾಗಿರುವ ಬೈಕ್! ಅದನ್ನು ಏರಿ ಕ್ಯಾಂಪಸ್ಗೆ ಬಂದರೆ, ಅರೆ! ಅದ್ಭುತ. ರಂಗು ರಂಗಿನ ಬಾನಿನಲ್ಲಿ ಬೇಕೆಂದರಲ್ಲಿ ಅಡ್ಡಾಡುವ ಬಾನಾಡಿಗಳಂತಹ, ಶುದ್ಧ ಕನಸ್ಸನ್ನು ಹೊತ್ತು ಸಾಗುತ್ತಿರುವ ದೀಪಗಳ ಸಾಲುಗಳಂತಹ ಮನಸ್ಸುಗಳ ಮೆರವಣಿಗೆ.ಹೀಗೆ ಪ್ರತೀ ದಿನದ ಹತ್ಯೆಯಲ್ಲೂ ಮರುದಿನದ ಗಂಗೋತ್ರಿಯ ಹರಿವಿಗೆ ಹೊಸತನ ದೊರಕುತ್ತಿರುತ್ತದೆ. ಇದೇನು ಇಂದು ನಿನ್ನೆಯದ್ದಲ್ಲ. ಸಾವಿರ ಸಾವಿರ ದಿನಗಳಲ್ಲೂ ಆಕಾಶ ಮತ್ತು ಚಂದ್ರನಿಗಿದ್ದಂತಹ ಗಟ್ಟಿ ಸಂಬಂಧ ಗಂಗೋತ್ರಿಯ ನೆಲದ್ದು. ಧೋ.. ಎಂದು ಭೋರ್ಗರೆವ ಹಾಳು ಮಳೆಗೂ ಕ್ಯಾಂಪಸ್ಸಿನಲ್ಲಿ ಕಲರವ ಇದ್ದೇ ಇರುತ್ತದೆ. ಇನ್ನು 'ಮಿಂಚು ಗುಡುಗುಗಳು' ಮಾಮೂಲು ದಾರಿಗಳಲ್ಲಿ, ಕ್ಯಾಂಟೀನು, ಬಸ್ಸ್ಟ್ಯಾಂಡ್ಗಳಲ್ಲಿ ದಿನಾ ಎದುರಾಗುತ್ತವೆ ಅಲ್ಲವೇ ಗೆಳೆಯರೆ. ಕುಣಿದು ಕುಪ್ಪಳಿಸುವುದಕ್ಕೆ, ಗೆಳೆಯರ ಹೆಗಲಿನಲ್ಲಿ ಪುಟ್ಟ ಮಗುವಾಗಿ ಕಣ್ಣೀರು ಸುರಿಸುವುದಕ್ಕೆ, ಅವಳಿಗಾಗಿ ಕಾಯುತ್ತಾ ಕಾಲ ಸವೆಸುವುದಕ್ಕೆ, ಅವಳಿಗಾಗಿಯೇ ಲೈಬ್ರೆರಿ, ಕ್ಯಾಂಟೀನ್, ಕ್ಲಾಸುಗಳಲ್ಲಿ ಅಡ್ಡಾಡುವುದಕ್ಕೆಲ್ಲಾ ಅವಕಾಶ ನೀಡುವುದು ಇದೇ ಗಂಗೋತ್ರಿ. ಗಂಗೋತ್ರಿಯ ಹಸಿವೇ ಅಂತಹದ್ದು. ಅಕ್ಷರದಿಂದ ಹಿಡಿದು ಅನ್ನದವರೆಗೆ, ದು:ಖದಿಂದ ಆರಂಭಿಸಿ ಕೇಕೆ ಹಾಕುವವರೆಗೆ, ಕಾಯುವ ಕಷ್ಟದಿಂದ ತೊಡಗಿ ಅವಳು ಕಾಣಿಸುವ ಸುಖಗಳಿಗೆಯವರೆಗೆ, ಕೊನೆಗೆ ಹಾಳು ನಿದ್ದೆಯಿಂದ ಎದ್ದು ನಮ್ಮ ಎಂದಿನ ಇನಿಯ-ಹಳೆಯ ಕಂಬಳಿ ಸುತ್ತಿ ಮಲಗುವವರೆಗೆ ಒಂದಿಡೀ ಕಾಲ ಚಕ್ರ ಸುತ್ತುವ ಹಾದಿಯಲ್ಲೆಲ್ಲಾ ಗಂಗೋತ್ರಿಯ ಮಣ್ಣಿನ ಸುವಾಸನೆ ಇದ್ದೇ ಇರುತ್ತದೆ ಗೆಳೆಯರೆ.  ಮುಂದಿನ ದಿನಕ್ಕೆ ಆ ಹಸಿವು ಹಾಗೆ ಮುಂದುವರಿದಿರುತ್ತದೆ. ಬೇಕಿದ್ದರೆ ಹೊಟ್ಟೆಯ ಮೇಲೆ ಕೈಯಿಟ್ಟು ಆಲಿಸಿ ನೋಡಿ!!ಇದೆಲ್ಲಾ ನೆನಪಾದದ್ದು ಇದೇ ನಿನ್ನೆಯೆಂಬ ಶವದ ಮುಂದೆ ಕುಳಿತು 'ಮುಖಪುಟ' ನೋಡುತ್ತಿದ್ದಾಗ. ಇದೇ ಪುಟ್ಟ ಗೆಳೆಯನೊಬ್ಬ ಬಂದು ಪೆನ್ನಿನಿಂದ ಒಂದಕ್ಷರ ಕೆತ್ತಿಕೊಡಿ ಎಂದಾಗ. ಅರೆ, ನಾನು ಹೀಗೆ ಮನಸ್ಸಿನ ಮಾತಿಗೆ ಅಕ್ಷರದಲ್ಲಿ ಬಸಿರು ಮೂಡಿಸದೆ ಕಾಲವೆಷ್ಟಾಯಿತು? ಅಗೋ ಅಲ್ಲೇ ಅವಳ ಗೆಜ್ಜೆಯ ಸದ್ದು. ಹೂಂ ಅಂದದ್ದೂ ಸರಿಹೋಯಿತು. ಬರೆದು ಬಿಡಲೇ, ಅದು ನನ್ನ ಕೆಲಸ, ಊಟ ಮಾಡಿದಂತೆ, ಹೊಗೆಯಾಡಿದಂತೆ! ಆಗಬೇಕೆಂದರೆ ಬರೆಯಬೇಕು, ಅದನ್ನು ಯಾರಾದರೂ ಓದಿದಾಗ, ಓದುತ್ತಿರುವಾಗ ದೂರದಲ್ಲಿ ನಿಂತು, ನನ್ನ ಅಕ್ಷರದ ಘಮ ಹೀರುತ್ತಿರುವ ಮುಖಗಳ ಮುಗುಳ್ನಗುವನ್ನು ಕಂಡಾಗ ಆಗುವ ಸುಖ, ಅಸಲು ಸಾವಿನಲ್ಲೂ ಇರಲಿಕ್ಕಿಲ್ಲ ಗೆಳೆಯರೆ! ಹಾಗಾಗಿ ಸುಮ್ಮ ಸುಮ್ಮನೆ ಮನಸ್ಸಿನ ಮಾತಿಗೆ ಆಕಾರಗಳನ್ನು ಸೇರಿಸಿ ಮುಂದಿಟ್ಟುಬಿಡಿ, ಓದುವ ಕಣ್ಣುಗಳಿಗೆಲ್ಲಾ ಅದು ಸಾವಿರಾರು ರೂಪಗಳನ್ನು ಕೊಟ್ಟೀತು, ಯಾರಿಗೊತ್ತು! ನಿಮ್ಮ ಹೆಸರಿಗೆ ಹೆಸರು ಬಂದೀತು! ಯಾವುದೂ ಆಗದಿದ್ದರೆ ಪೆನ್ನಿನ ಶಾಯಿ ಮುಗಿದು, ಹೊಸ ಪೆನ್ನಾದರೂ ಕಿಸೆಯಲ್ಲಿ ರಾರಾಜಿಸೀತು!ಹೀಗಂದುಕೊಂಡೇ ನಾನು ರಾತ್ರಿ ಬರೆಯಲು ಹೊರಟಿದ್ದು. ಬರೆದ ಶೀಷರ್ಿಕೆಯ ಮೊದಲ ಅಕ್ಷರಕ್ಕೇ ಪೆನ್ನು ಒಲ್ಲೆನೆಂದಿತು. ಹಾ, ಇನ್ನು ಈ ಕರೆಂಟೋ, ಅವಳ ನೋಟದಂತೆ ಚಶ್ಮಾದೊಳಗಿನಿಂದ ಕಣ್ಣುಮಿಟುಕಿಸಿದಂತೆ ಹಾಗೆ ಬಂದು ಹೀಗೆ ಹೋಯಿತು! ಹೊರಗೆ ಬಾನಿನಲ್ಲಿ ಚಂದ್ರನೂ ಇಲ್ಲದನ್ನು ಕಂಡು, ಅವನಿಗೂ ಬೈದು, ಕಂಬಳಿ ಸುತ್ತಿ ಮಕಾಡೆ ಮಲಗಿ ಕಣ್ಣುಮುಚ್ಚಿದೆ. ಬೆಳಗ್ಗೆ ಎದ್ದರೆ ಹೊಸ ಮುಂಜಾವು. ಅಂಗಡಿಗೆ ಬಂದು ತೆಗೆದುಕೊಂಡ ಹೊಸ ಪೆನ್ನಿನ ಶಾಯಿಯಲ್ಲೇ, ನಿನ್ನೆ ಉಳಿದುಹೋದ ಅಕ್ಷರಕ್ಕೆ, ಅಕ್ಷರ ಜೋಡಿಸುತ್ತಿದ್ದೇನೆ. ಆ ಹಾಳು ಕನಸಿಗೂ ಮತ್ತೊಂದು ಹೊಸ ಕನಸು ಪೋಣಿಸುವಂತಿದ್ದರೆ ಹೇಗಿರುತ್ತಿತ್ತು, ಅಬ್ಬಾ... ಇರಲಿ, ಹೊಸ ಕನಸಿನ ಮುಂಜಾವು ಹೀಗೆ ಎದುರಾಗಿದೆ, ಇನ್ನು ಅವಳೂ ಎದುರಾದಾಳು! ನೀವೆಲ್ಲರೂ ಕಂಡ ಕನಸಿನ ಬದುಕಿಗೆ ಗೆಜ್ಜೆ ಕಟ್ಟಿಕೊಳ್ಳಿ. ಕಣ್ಣೂ ನಿಮ್ಮದೇ, ಕನಸೂ ನಿಮ್ಮದೇ. ಕಂಡ ಕನಸ್ಸನ್ನು ಹೀಗೆ ಬರೆದುಕೊಳ್ಳಿ, ಬರವಣಿಗೆಯ ಸುಖ ನಿಮಗೆ ನೀವೇ ಅನುಭವಿಸಿಕೊಳ್ಳಿ...
ಯಶುಕುಮಾರ್. ಡಿ ಸಂಶೋಧನಾರ್ಥಿ  ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017