ಕಳ್ಳಿಗಿಡದ ಹೂ
ಮುಡಿಯೇರದ ಗುಡಿಸೇರದ ಕಳ್ಳಿಗಿಡದ ಹೂ 19 ವರ್ಷಗಳ ನಂತರ ಹೂ ಬಿಡುತ್ತಿದೆ. ಈ ಹೂ ಕಾಣಸಿಗುವುದು ಅಪರೂಪ. ಮುಡಿಪು, ಬಾಳೆಪುಣಿ ಗ್ರಾಮ ಪಂಚಾಯಿತಿ, ಕುಕ್ಕುಕಟ್ಟೆ ಮನೆಯ ಆವರಣದ ಬೇಲಿಯಲ್ಲಿ ಹೂವು ಚೆಲುವೆಲ್ಲಾ ನಂದೆನ್ನುತ್ತಾ ಮೈದುಂಬಿಕೊಂಡು, ಮುಂಜಾವಿನ ಮಂಜಿನಲ್ಲಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಂತಂತ್ತಿದೆ.ಕಳ್ಳಿಗಿಡದ ಹೂ ಬಿಟ್ಟಾಗ ಮೊಸರಿನ ಗಡಿಗೆ ಒಡೆದು ಚೆಲ್ಲಾಪಿಲ್ಲಿಯಾದಂತೆ ಭಾಸವಾಗುತ್ತದೆ. ಎಲೆಯ ಕೆಲಸವನ್ನು ಕಾಂಡವೇ ಮಾಡುವುದು ಕಳ್ಳಿಗಿಡದ ಒಂದು ವಿಶಿಷ್ಟ ಲಕ್ಷಣ. ಈ ಗಿಡವು ಬಹಳ ದಿನಗಳ ಕಾಲ ನೀರನ್ನು ತನ್ನ ಕಾಂಡದಲ್ಲಿಯೇ ಶೇಖರಿಸಿ, ಅದನ್ನು ಪುನಃ ಮರುಬಳಕೆ ಮಾಡುತ್ತದೆ.ಕಳ್ಳಿಗಿಡ ಎಂದರೆ ಮರುಭೂವಿಯಲ್ಲಿ ಬೆಳೆಯುವ ಒಂದು ಬಗೆಯ ಸಸ್ಯ ಇದರಲ್ಲಿ ಹೂಗಳು ಅಪರೂಪಕ್ಕೆ ಮೂಡುತ್ತವೆ. ಇಂಗ್ಲೀಷ್ನಲ್ಲಿ ಕ್ಯಾಕ್ಟಸ್ ಎನ್ನುತಾರೆ. ಕಳ್ಳಿಗಿಡಗಳ ಹೂವುಗಳು ದೊಡ್ಡದಾಗಿ, ಆಕರ್ಷಕವಾಗಿರುತ್ತವೆ. ಆದರೆ ಈ ಹೂ ಕೆಲವೇ ಗಂಟೆಗಳಲ್ಲಿ ಮುದುಡಿ ಬಾಡಿಹೋಗುತ್ತದೆ.
ಚಂದ್ರಶೇಖರ ಎಂ.ಬಿ ಛಾಯಾಗ್ರಾಹಕ ಎಸ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ
ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಈ ಬ್ಲಾಗ್ ನಲ್ಲಿ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ. ಇಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತ ಸಹೃದಯಿಗಳು, ಪತ್ರಿಕೋದ್ಯಮಿಗಳು ಹಾಗೂ ಕನ್ನಡ ಪ್ರೇಮಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ಕಥೆ,ಕವನ, ಚುಟುಕು,ವಿಮರ್ಶೆ,ನುಡಿ ಚಿತ್ರ, ಚಿತ್ರ ಕವನ,ಲೇಖನ ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಲಾಗುವುದು.
9/25/14
9/23/14
![]() |
| ಅಂತರ್ಜಾಲ ಚಿತ್ರ |
ಅಮ್ಮನ ಪ್ರೀತಿ ಮರೆತೆಯಾ
ಗೆಳೆಯಾ, ಅಮ್ಮನ ಕಣ್ಣ ಹಣತೆಯ ಬೆಳಕಿನಲ್ಲಿ ಬೆಳೆದುದೊಡ್ದವನಾದವನು ನೀನು ಈಗ...
ಮೋಹದ ಹೆಣ್ಣಿನ ಕಣ್ಣ ನಕ್ಷತ್ರದ ಸೆಳೆತಕ್ಕೆ ಸಿಲುಕಿ
ಅಮ್ಮನಿಗೆ ಬೆನ್ನು ತಿರುಗಿಸುವೆಯಾ!
ಅಮ್ಮನ ತೊಡೆಯಲಿ ಮಲಗಿ ಬೆಚ್ಚಗೆ ಕನಸು ಕಾಣಲು
ಕಲಿತವನು ನೀನು
ರಕ್ತಮಾಂಸಗಳನ್ನು ಅಮ್ಮನಿಂದ ಎರವಲು
ಪಡೆದಿರುವುದನ್ನು ಮರೆತೆಯಾ
ಈಗ ಬೇರೊಂದು ಹೆಣ್ಣಿನ ನುಣುಪು ಕೆನ್ನೆಗಳ
ಮೋಹಕ್ಕೆ ಸಿಕ್ಕಿ
ಅಮ್ಮನ ಸುಕ್ಕುಗೆನ್ನೆಗೆ ಮುತ್ತಿಡುವುದನ್ನು ಮರೆವೆಯಾ!
ಒಂದು ಕಾಲಕ್ಕೆ ನಿನ್ನ ಅಮ್ಮನಿಗೂ ಆ ಹೆಣ್ಣಿನಂತಹ
ಯೌವ್ವನವಿತ್ತು ರಟ್ಟೆಗಳಲ್ಲಿ ಬಲವಿತ್ತು
ನಕ್ಷತ್ರದಂತ ಕಣ್ಣಿತ್ತು ಕಣ್ಣಳಲ್ಲಿ ಕನಸಿತ್ತು
ಸೋತರೂ ಗೆಲ್ಲುವ ವಿನಯವಿತ್ತು
ಅಮ್ಮನು ಸುರಿಸಿದ ಮೈ ಬೆವರಿನಲ್ಲಿ ನಿನ್ನ ಭವಿಷ್ಯವಿತ್ತು
ಈಗ ಅದನ್ನೆಲ್ಲಾ ಮರೆತೂ ಬೇರೊಂದು ಹೆಣ್ಣಿನ
ಸೀರೆ ಸೆರುಗಿನಲ್ಲಿ ಮುಖ ಹುದುಗಿಸಿ
ಅಮ್ಮನನ್ನು ಮುರುಕಲು ಸೂರಿನಡಿ ಕೂರಿಸಿ
ಬದುಕ ಪ್ರೀತಿಸುವ ಕ್ರೂರಿ ನೀನಾಗಬೇಡಾ ಗೆಳೆಯಾ....!!!
ಅರ್ಚನಾ ಎಸ್. ಶೆಟ್ಟಿ
ಪ್ರಥಮ ಎಂ.ಎ. ಕನ್ನಡ ವಿಭಾಗ
![]() |
| ಅಂತರ್ಜಾಲ ಚಿತ್ರ |
ಮನಸ್ಸು
ಭಾವನೆಗಳ ಮೃದು ಮಧುರ ತಾಣಕನಸುಗಳ ಸುಂದರ ಲೋಕ ಮನಸ್ಸು
ಹೂವಿನಂತೆ ಅರಳುವುದು
ಸಂತೋಷದಿ ಬಿರಿಯುತಿರುವುದು
ಹತೋಟಿಯಲ್ಲಿರದೆ ಒಂದೊಮ್ಮೆ ಈ ಮನಸ್ಸು
ಹುಚ್ಚು ಕುದುರೆಯಂತೆ ಓಡುವುದು,
ಈ ಮನಸ್ಸಿಗೆ ಕಡಿವಾಣ ಹಾಕಲಾಗದೆ
ಎಲ್ಲಿಯೋ ಕೈ ಜಾರಿ ಹೋಗುವುದು.
ಮನಸ್ಸೆಂಬ ಕನ್ನಡಿಯು ದುಃಖದ
ತೆರೆಗೆ ಬಡಿದು ಒಡೆದು ಹೋಗಬಾರದು
ಓಡುವ ಮನಸ್ಸನ್ನು ಹಿಡಿವ
ಸಾಹಸದಿ ಅದನ್ನು ಕಳೆದುಕೊಳ್ಳಬಾರದು.
ಮನಸ್ಸು ಬದುಕೆಂಬ ಹಗಲಲ್ಲಿ ದುಡಿದು
ಮೃತ್ಯುವೆಂಬ ಇರುಳಲ್ಲಿ ಅಮರವಾಗುವುದು.
ಆಸೆಯೆಡೆ ಆಕರ್ಷಿಸಲ್ಪಡುವಮನವ
ಹತ್ತಿಕ್ಕಿದರೆ ಜಯ ನಮ್ಮದಾಗುವುದು.
ಚೇತನಾ ಎಚ್. ಆರ್.
ಪ್ರಥಮ ಎಂ.ಎ. ಕನ್ನಡ
ನನ್ನವ್ವ
ಸಂದೇಶ ಸಾರಲು ಹೊರಟ ಹಕ್ಕಿಗಳು
ಹಾರಾಡುತ್ತಿವೆ ಬಾನಗಲದಲಿ
ಅಂದು ನಗುಮೊಗದ ನನ್ನವ್ವ
ಮಾತಿನ ಸುರಿಮಳೆಯೊಂದಿಗೆ ಕಳಿಸಿದಳು
ನಾನೂ ಹೊರಟೆ ಕಾಲೇಜಿಗೆ ಆನಂದದಿ
ಮಿತ್ರರ ಜೊತೆ ಹರಟುತ್ತಿದ್ದ ಆ ಕ್ಷಣ
ಕರೆದಿದ್ದರು ನನ್ನ ಆಫೀಸಿಗೆ
ಏನು ಪ್ರಶ್ನಿಸುತ್ತಾರೋ ಎಂಬ ಭಯ
ಮನದಾಳದಲ್ಲಿ ಕಾಡುತ್ತಿತ್ತು ತಣ್ಣಗೆ
ತಿಳಿಯಿತು ನನ್ನವ್ವ ಇನ್ನಿಲ್ಲವೆಂದು
ಹೆಜ್ಜೆಗಳು ತಡವರಿಸಿದವು ಮಾತು ಬರಿದಾಯ್ತು
ಪರಿಸರವೆ ಮೌನವಾಗಿ
ದುಃಖ ಸಂದೇಶ ಗೋಚರಿಸುತ್ತಿತ್ತು..
ಅಮೂಲ್ಯವಾದದ್ದು ಕಳೆದು ಹೋದಂತೆ
ಬಾಡಿತ್ತು ಮನೆಯವರ ಮುಖ
ನನ್ನ ಮನವು ಅದನ್ನೇ ಹಿಂಬಾಲಿಸಿತು
ದಿನಾ ಆಕೆಯ ಕಣ್ಣೋಟ ನಾ ಬರುವ
ಹಾದಿಯನ್ನೇ ಕಾಯುತ್ತಿತ್ತು.
ನಗುನಗುತಾ ಮಾತಾಡಿಸುತ್ತಿದ್ದ ಅವ್ವ
ಇಂದು ಮೌನವಾಗಿ ಮಲಗಿದ್ದಾಳೆ.
ಹೊತ್ತಾಯಿತು, ಹೊರಟಾಯಿತು ಎಂಬಂತೆ
ಹೋಗಿಯೇ ಬಿಟ್ಟಳು ಆ ದಿನ
ಈಗಲೂ ಬರುತ್ತಾಳೆಂದು ಅನಿಸುತ್ತಿದೆ
ನನ್ನ ಮನದಾಳದಲ್ಲಿ
ನನ್ನ ನೆನಪುಗಳ ರಾಶಿಯನ್ನು
ಕೆದಕಿ ನೋಡಿದರೆ..
ಕಾಣುವುದು ಅವ್ವನ ಮುಖದ ಛಾಯೆ,
ನನ್ನ ಹೃದಯಾಳದಲ್ಲಿದ್ದುಕೊಂಡು ನನ್ನವ್ವ
ಅಮಿತ ಸುಖ ನೀಡುವಳು ಎಂದೆಂದೂ
ಸುಚಿತ್ರ ಕುಮಾರಿ ಪ್ರಥಮ ಎಂ.ಎ.ಕನ್ನಡ
ಪತಾಕೆ
ಇಡೀ ಊರಿಗೆ ಊರೇ ಸ್ವಾತಂತ್ರ್ಯೋತ್ಸವದ ಸಿದ್ಧತೆಯ ಸಂಭ್ರಮದಲ್ಲಿದೆ. ಬೇರೆ ಬೇರೆ ಊರಿಗೆ ಕೆಲಸದ ನಿಮಿತ್ತ ಹೋಗಿದ್ದ ಶಾಲೆಯ ಹಳೆ ವಿದ್ಯಾಥರ್ಿಗಳು ಸ್ವಾತಂತ್ರ್ಯೋತ್ಸವಕ್ಕೆ ಆಗಮಿಸಿದ್ದರು. ಏ.....ಅಬ್ದುಲ್ಲಾ... ಹೇಗಿದ್ದೀಯ? ಏ.....ಆರಾಮ್.....ಕಣೋ ವೆಂಕಟೇಶ, ನೀನು ಹೇಗಿದ್ದೀಯಾ? ಆರಾಮ್.....ಕಣೋ....ಮತ್ತೆ ಬಾಂಬೆ ಹೇಗಾಗ್ತದೆ? ಎಂದು ವೆಂಕಟೇಶ ಮಾತು ಮುಂದುವರಿಸಿದ. ಎಂತದಾ... ಬೆಳಗ್ಗಿನಿಂದ ಸಂಜೆತನಕವು ಕೆಲಸವೇ ಆಗ್ತದೆ, ಪುರುಸೊತ್ತೇ ಇಲ್ಲ ಮಾರಾಯ ಎಂದು ಅಬ್ದುಲ್ಲಾ ಉತ್ತರಿಸಿದ. ಸರಿ ನಾಳೆ ಶಾಲೆಗೆ ಬರ್ತೀಯ ಅಲ್ವ ನಾಡಿದ್ದಿಗೆ ಡೆಕೊರೇಶನ್ ಆಗ್ಲಿಕ್ಕೆ ಉಂಟು ಎಂದ ವೆಂಕಟೇಶನಿಗೆ, ಸರಿ ಬರ್ತೇನೆ ಎಂದು ಅಬ್ದುಲ್ ಪ್ರತ್ಯುತ್ತರಿಸಿದನು.ತನ್ನ ಮನೆಗೆ ಬಂದ ವೆಂಕಟೇಶ, ಅಮ್ಮ ಅಬ್ದುಲ್ ಬಾಂಬೆಯಿಂದ ಬಂದಿದ್ದಾನೆ ಎಂದ. ಹೌದಾ....ಉಮ್ಮ ಮತ್ತು ಕಾಕಾ ಬಂದಿದಾರ? ಎಂದು ವೆಂಕಮ್ಮ ಪ್ರಶ್ನಿಸಿದಳು. ಇಲ್ಲ, ಗೊತ್ತಿಲ್ಲ ನಾನು ಕೇಳಿಲ್ಲ ಎಂದ ವೆಂಕಟೇಶ. ಕೂಡಲೇ ವೆಂಕಮ್ಮ ಸರಿ, ನಾನು ಹೋಗಿ ಮಾತನಾಡಿ ಬರ್ತೇನೆ ಎಂದು ಹೊರಟು ಹೋದಳು.
ಇತ್ತ ವೆಂಕಮ್ಮ, ಖತೀಜಾಬಿ ಅವರ ಮನೆಯ ಗೇಟನ್ನು ತೆರೆದು ಒಳಗೆ ಪ್ರವೇಶಿಸುತ್ತಿದ್ದಂತೆ ಬನ್ನಿ ವೆಂಕಮ್ಮ ಹೇಗಿದ್ದೀರಿ? ಎಂದಳು ಖತೀಜಾಬಿ. ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ ಉಮ್ಮ? ಎಂದಳು ವೆಂಕಮ್ಮ. ಚೆನ್ನಾಗಿದ್ದೇನೆ, ಮತ್ತೆ ವಿಶೇಷ ವೆಂಕ್ಟೇಶನಿಗೆ ಮದುವೆ ಮಾಡುವ ಯೋಚನೆ ಉಂಟ? ಹೇಳ್ತಾ ಇದ್ದೇವೆ ಮದುವೆ ಮಾಡ್ಕೊ ಮಾರಾಯ ಅಂತ. ಆದ್ರೆ ಅವನು ಅದರ ಯೋಚನೆಯಲ್ಲೇ ಇಲ್ಲ ಎಂದು ವೆಂಕಮ್ಮ ಉತ್ತರಿಸಿದಳು. ಇವರಿಬ್ಬರ ಮಾತು ಮುಂದುವರಿಯುತ್ತಿದ್ದಂತೆ ಹಸನಬ್ಬ ಬಂದುದನ್ನು ಕಂಡು, ವೆಂಕಮ್ಮ ಹೇಗಿದ್ದೀರಿ ಕಾಕಾ ಎಂದಳು. ಹಾಂ...ಚೆನ್ನಾಗಿದ್ದೇನೆ ಮನೆಯಲೆಲ್ಲಾ ಚೆನ್ನಾಗಿದ್ದಾರ ಎಂದರು ಹಸನಬ್ಬ. ಹಾಂ....ಚೆನ್ನಾಗಿದ್ದಾರೆ ಎಂದಳು ವೆಂಕಮ್ಮ. ಇವರ ಮಾತು ಮುಂದುವರಿಯುತ್ತಿದ್ದಂತೆ, ಸೂರ್ಯ ಪಶ್ಚಿಮಕ್ಕೆ ವಾಲುತ್ತಿರುವುದನ್ನು ಗಮನಿಸಿದ ವೆಂಕಮ್ಮ ಮನೆಗೆ ತೆರಳಿದಳು.
![]() |
ಮರುದಿನ, ಮುಂಜಾನೆ ಜನರೆಲ್ಲಾ ಎದ್ದು ತಮ್ಮ ತಮ್ಮ ದೈನಂದಿನ ಕೆಲಸ ಮುಗಿಸಿ ಶಾಲೆಯನ್ನು ಸ್ವಚ್ಛಗೊಳಿಸಲು ಹೊರಟರು. ಊರಿಗೆ ಊರೇ ಬಂದು ಸೇರಿತು. ಎಲ್ಲರೂ ಒಟ್ಟಾಗಿ ಶಾಲೆಯ ವಾತಾವರಣವನ್ನು ಶುಚಿಗೊಳಿಸಿ ಬಳಿಕದಲ್ಲಿ ಕೇಸರಿ, ಹಸಿರು, ಬಿಳಿ, ಪತಾಕೆಗಳನ್ನು ಎತ್ತರ ಎತ್ತರವಾಗಿ ನೆಟ್ಟರು. ಕಟ್ಟಡದ ಒಂದು ಬದಿಯಲ್ಲಿ ಕೇಸರಿ ಬಣ್ಣದ ಕಾಗದದ ತೋರಣಗಳು ರಾರಾಜಿಸಿದವು. ಇನ್ನೊಂದು ಬದಿಯಲ್ಲಿ ಹಸಿರು ಬಣ್ಣದ ಕಾಗದದ ತೋರಣಗಳು ರಾರಾಜಿಸಿತು. ಮತ್ತೊಂದು ಬದಿಯಲ್ಲಿ ಬಳಿ ಬಣ್ಣದ ಕಾಗದದ ತೋರಣಗಳು ರಾರಾಜಿಸಿದವು. ಮರುದಿನಕ್ಕೆ ಈ ಎಲ್ಲಾ ಸಿದ್ಧತೆ ನಡೆಸಿ ಮನೆಗೆ ತೆರಳಿದರು. ಹೊತ್ತು ಮುಳುಗಿ ರಾತ್ರಿಯಾಗುತ್ತಿದ್ದಂತೆ ಎಲ್ಲರು ನೆಮ್ಮದಿಯಿಂದ ನಿದ್ರಿಸಿದರು. ಬೀದಿಯಲ್ಲಿದ್ದ ಆಡುಗಳು ಮಾತ್ರ ಕಟ್ಟಿದ್ದ ಕಾಗದದ ತೋರಣಗಳನ್ನು ತಿನ್ನುತ್ತಿದ್ದವು.
ಮರುದಿನ ಎಲ್ಲರ ಮುಖದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಕುಣಿಯುತ್ತಿತ್ತು. ಊರಿಗೆ ಊರೇ ಶಾಲೆಯ ಕಡೆ ಧಾವಿಸಿತು. ಕಾಗದದ ತೋರಣಗಳನ್ನು ಕಟ್ಟಿದ ಹಗ್ಗ ಕಡಿದು ಬಿದ್ದದ್ದನ್ನು ಗಮನಿಸಿದ ಜನರ ಗುಂಪು, ಪಿಸುಪಿಸು ಮಾತನಾಡುತ್ತಾ ತನ್ನಿಂತಾನಾಗಿಯೇ ವಿಭಾಗವಾಯಿತು. ಶಾಲೆಯ ಮುಖ್ಯೋಪಾಧ್ಯಾಯರು ಧ್ವಜವನ್ನು ಕಟ್ಟಿ, ಧ್ವಜ ಸ್ತಂಭದ ತುದಿಗೇರಿಸಿದರು. ಗಣ್ಯರು ಧ್ವಜಾರೋಹಣ ನಡೆಸಿದರು. ಎಲ್ಲರೂ ಧ್ವಜಕ್ಕೆ ಗೌರವ ಸೂಚಿಸುತ್ತಿದ್ದಂತೆ ಗುಂಪುಗಳು ಪರಸ್ಪರ ಕಾದಾಟಕ್ಕೆ ಮುಂದುವರಿದವು. ಜನರಲ್ಲಿದ್ದ ಈ ಕಾದಾಟ ಸಮಯ ಕಳೆಯುತ್ತಿದ್ದಂತೆ ಪತಾಕೆಗಳಿಗೂ ಹರಡಿತು. ಕಾದಾಟ ಮುಂದುವರಿದು ಪತಾಕೆಗಳು, ಕಾಗದದ ತೋರಣಗಳು ನೆಲಕ್ಕುರುಳಿದವು. ನೋಡು ನೋಡುತ್ತಿದ್ದಂತೆ ಜನರೂ ನೆಲಕ್ಕುರುಳಿದರು. ಕ್ಷಣದಲೇ ಇಡೀ ಊರನ್ನೇ ಸ್ಮಶಾನ ಮೌನವು ಆವರಿಸಿತು.
ಆಕಾಶದಲ್ಲಿ ರಣಹದ್ದು, ಕಾಗೆಗಳ ಹಾರಾಟದ ನಡುವೆ ಧ್ವಜಸ್ತಂಭದಲ್ಲಿದ್ದ ತ್ರಿವರ್ಣಧ್ವಜ ತಲೆತಗ್ಗಿಸಿ ನಿಂತೇ... ಇತ್ತು.
ದೀಪಕ್ ಎನ್ ದುರ್ಗ
ದ್ವಿತೀಯ ಎಂ.ಎ.ಕನ್ನಡ
ಕನ್ನಡ ವಿಭಾಗ.
ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್...?
ಅರೆ..!! ಇದೇನಿದು ಅಂತ ತಿಳ್ಕೊಂಡ್ರಾ? ಹೌದ್ರಿ ನಮ್ ಕಥೆನಾ ಯಾರ್ರಿ ಕೇಳ್ತಾರೆ. ಕಾಡಲ್ಲಿ ಆರಾಮಾಗಿ ಇದ್ದ ನನ್ನನ್ನ ತಂದು ಕೆತ್ತಿ ಕೆತ್ತಿ ನೋವು ಮಾಡ್ತಾರಲ್ವಾ ಇದು ಸರಿನಾ? ಎಲ್ಲೋ ಇದ್ದ ನನ್ನನ್ನು ಬಡಗಿ ತಂದು ಚೆನ್ನಾಗಿ ನಯಗೊಳಿಸಿ, ನಟ್-ಬೋಲ್ಟ್ಗಳ ಬಂಧನ ಮಾಡಿ, ಉಸಿರು ಬಿಗಿಯುವಂತೆ ಮಾಡುತ್ತಾನಲ್ವಾ ಇದು ತಪ್ಪಲ್ವಾ?. ಸರಿ, ಇದು ಸಾಕಾಗಲ್ಲಾಂತ ಶಾಲಾ-ಕಾಲೇಜುಗಳಲ್ಲಿ ನನ್ನ ಮೇಲೆ ಕೂರುವುದಲ್ಲದೇ ಬ್ಲೇಡ್-ಪೆನ್ನುಗಳಲ್ಲಿ ಅವರವರ ಇತಿಹಾಸ- ಚರಿತ್ರೆಗಳನ್ನು ಕೆತ್ತುವುದೇ ಅವರಿಗೊಂದು ಬಹು ದೊಡ್ಡ ಹಬ್ಬ. ಅಲ್ಲಾ ನನ್ನ್ ಮೇಲೆ ಈ ರೀತಿ ಕೆತ್ತುವುದರಿಂದ ಅವರಿಗೆ ಅದೇನು ಹಬ್ಬನೋ ನಾ ಕಾಣೆ..
ಈ ರೀತಿ ಕೆತ್ತಿಯೇ ತೀರುತ್ತೇನೆ ಅಂತ ಇದ್ರೆ ಸರಿ ಕೆತ್ಕೊಳ್ಲಿ ಬಿಡಿ. ಎಲ್ಲವನ್ನು ಸಹಿಸ್ಕೋತೇನೆ . ಆದ್ರೆ ಇನ್ನು ಕಷ್ಟದ ವಿಷ್ಯ ಇದೆ ಕೇಳಿ. ನನ್ನ್ ಮೇಲೆ ಗೀಚೋದು ಮಾತ್ರ ಅಲ್ದೇ 2-3 ದಡಿಯಂದಿರು ಬಂದು ಕೂತ್ರೆ ಉಸ್ಸಪ್ಪಾ..!! ನಾ ಸಂಪೂರ್ಣ ಸತ್ತಂಗೆ.
ಎಕ್ಸಾಂ ಟೈಮ್ ಬಂತಂದ್ರೆ ಕೇಳೋದೆ ಬೇಡ. ಮಕ್ಳು ಒಮ್ಮೆ ಪಾಸಾಗ್ಲಿ ಅಂತ ಸಿಕ್ಕ-ಸಿಕ್ಕಲ್ಲಿ ಗೀಚಿದ್ರು ನಾ ಅದ್ನೆಲ್ಲಾ ಸಹಿಸ್ಕೋತೀನಿ. ಮಕ್ಳು ಹುಷಾರಾಗಿದ್ರೆ ಅವ್ರಿಗಿಂತ ಹುಷಾರು ಅವ್ರ ಟೀಚರ್. ಈ ಥರ ಬರ್ದದ್ದನ್ನೆಲ್ಲಾ ಬ್ಲೇಡ್ ತಂದು ಸ್ವತಃ ಅವ್ರೆ ಅದ್ನೆಲ್ಲಾ ಉಜ್ಜುವುದು. ಈ ರೀತಿ ಉಜ್ಜೋವಾಗ ಆಗುವ ನೋವು ಅಷ್ಟಿಷ್ಟಲ್ಲ. ಹಿಂದಿನ ಪೀಳಿಗೆಯವರು ಈ ರೀತಿ ನೋವು ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾಯಿತು. ನನ್ನ ನೋವನ್ನು ಯಾರು ಅರ್ಥ ಮಾಡಿಕೊಳ್ಳುವವರಿಲ್ಲ. ನಿಮ್ಮ ಜೊತೆ ನನ್ನದೊಂದು ಕೋರಿಕೆ, ದಯಮಾಡಿ ನೀವಾದರೂ ನನ್ನ ನೋವನ್ನು ಅರ್ಥ ಮಾಡಿಕೊಳ್ಳಿ. ನನ್ನ ಮೇಲೆ ಪದೆ ಪದೇ ಗೀಚಿ ನನ್ನನ್ನು ನೋಯಿಸದಿರಿ. ನಿಮ್ಮನ್ನು ಕಾಪಾಡುವ ನನ್ನ ಮೇಲೆ ಸ್ವಲ್ಪನಾದ್ರೂ ಕರುಣೆ ತೋರಿಸಿ ಪ್ಲೀಸ್...
ಇಂತೀ ನಿಮ್ಮ...
ಡೆಸ್ಕ್-ಬೆಂಚ್
ಕೀರ್ತನ.ಬಿ ಪ್ರಥಮ ಎಂ.ಎ ಕನ್ನಡ
ಮಾತು..!
ಪೃಥಿವ್ಯಾಂ ತ್ರೀಣಿರತ್ನಾನಿ ಜಲಮಾನ್ಯಂ ಸುಭಾಷಿತಂಮೂಢೈ ಪಾಶಾಣ ಖಂಡೇಷು ರತ್ನ ಸಂಜ್ಞಾ
ವಿಧೀಯತೇ
ಭೂಮಿಯ ಮೇಲೆ ಮೂರು ವಸ್ತುಗಳನ್ನು ಶ್ರೇಷ್ಟವೆಂದು ಪರಿಗಣಿಸಲಾಗಿದೆ. ಅವೆಂದರೆ ಅನ್ನ, ನೀರು ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರನ್ನು ಶ್ರೇಷ್ಟ ರತ್ನವೆಂದು ಭಾವಿಸಿದ್ದಾರೆಂದು ಸುಭಾಷಿತವೊಂದು ಹೇಳುತ್ತದೆ.
ಮಾತು ಎನ್ನುವುದು ನಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮ ಮಾತ್ರವಲ್ಲ ವ್ಯಕ್ತಿತ್ವದ ಕೈಗನ್ನಡಿಯೂ ಹೌದು. ಅದು ಮಧುರವಾಗಿರಬೇಕು, ಇನ್ನೊಬ್ಬರನ್ನು ನೋಯಿಸುವಂತಿರಬಾರದು. ಬಸವಣ್ಣ ತನ್ನ ವಚನವೊಂದರಲ್ಲಿ ಹೇಳುವಂತೆ ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತಿರಬೇಕು. ಕಠಿಣವಾದ ನುಡಿಗಳಿಗಿಂತ ಮೃದುವಾದ, ಹಿತವಾದ ನುಡಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಕೆಲವೊಂದು ಒಳ್ಳೆಯ ಮಾತುಗಳು ಇನ್ನೊಬ್ಬರ ಜೀವನವನ್ನೇ ಬದಲಿಸಬಹುದು. ನಾವಾಡುವ ಮಾತು ನಮ್ಮ ಸಂಸ್ಕಾರವನ್ನು ಪ್ರತಿನಿಧಿಸುತ್ತದೆ. ಸರ್ವಜ್ಞ ಕವಿ ಮಾತಿನ ಬಗ್ಗೆ - ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರಿ ಮಾತು ಕಿವಿಯೊಳ್ ಕೂರ್ದಸಿಯ ಬಡಿದಂತೆ ಎನ್ನುತ್ತಾರೆ.
ಮಾತುಗಾರಿಕೆ ಎನ್ನುವುದು ಒಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳುವುದು ತುಂಬಾ ಕಷ್ಟ. ಮಾತನಾಡುವವರು ನಿಜವಾಗಿಯೂ ಜ್ಞಾನವುಳ್ಳವರಾಗಿರಬೇಕು. ಹದವರಿತು, ಸಂದರ್ಭವನ್ನರಿತು ಮಾತನಾಡಬೇಕು. ವ್ಯಾಸಸ್ಮೃತಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ : ನೂರರಲ್ಲಿ ಒಬ್ಬ ಮಾತ್ರ ಶೂರನಾಗುತ್ತಾನೆ. ಸಾವಿರದಲ್ಲಿ ಒಬ್ಬ ಮಾತ್ರ ವಿದ್ವಾಂಸ, ಹತ್ತು ಸಾವಿರದಲ್ಲಿ ಒಬ್ಬ ಮಾತ್ರ ಚತುರ ಮಾತುಗಾರನಾಗಬಲ್ಲ.
ಆದುದರಿಂದ ಮಾತುಗಾರಿಕೆ ಚತುರತೆಯ ಪ್ರದರ್ಶನವೂ ಹೌದು. ಮಾತಿನ ಕೌಶಲ್ಯದಿಂದ ಕುಳಿತಲ್ಲೇ, ನಿಂತಲ್ಲೇ ಜಗವನ್ನು ಆಳಬಹುದು.
ನುಡಿದ ಮಾತಿಂಗೆ ತಡಬಡ ಬಂದಲ್ಲಿ ನುಡಿದ ಭಾಷೆಗೆ ಭಂಗ ನೋಡ, ಹಿಡಿದ ಕುಲಕ್ಕೆ ಹಾನಿ ಬಂದಲ್ಲಿ ಒಡಲವಿರಿಸುವುದೆ ಭಂಗ ನೋಡಯ್ಯ, ಇದು ಕಾರಣ ನಡೆನುಡಿ ಶುದ್ದವಿಲ್ಲದಿದ್ದೆಡೆ ಚಂಡೇಶ್ವರ ಲಿಂಗವಾದರೂ ತಪ್ಪಿನೊಪ್ಪಿಗೊಳ್ ಮಡಿವಾಳಯ್ಯ. ಇದು ವಚನಕಾರ ಚಂದ್ರಯ್ಯನ ನುಡಿ. ಅವರ ಪ್ರಕಾರ ಮಾತು ಪ್ರಿಯವಾಗಿ, ಪ್ರಾಸಂಗಿಕವಾಗಿ, ಮೃದುವಾಗಿ,
ಪ್ರಯೋಜನಕಾರಿಯಾಗಿರಬೇಕು. ಮಾತಿಗೆ ಹೊತ್ತುಗೊತ್ತುಗಳಿರಬೇಕು, ಮನಸ್ಸಲ್ಲಿ ಲಕ್ಷ್ಯ ಮತ್ತು ನಾಲಿಗೆ ಹತೋಟಿಯಲ್ಲಿರಬೇಕು. ಮಾತು ಮಾಣಿಕ್ಯದಂತೆ ಒಮ್ಮೆ ಆಡಿದ ಮಾತು ಮತ್ತೆ ಸಿಗುವುದಿಲ್ಲ. ಆದರೆ ಅವು ನಾಶವಾಗುವುದು ಇಲ್ಲ. ಮಾತು ಮಾತಿಗೆ ಸೇರಿ ಜನಿಸಿದ್ದು ಪ್ರೀತಿ, ಮಾತು ಮಾತಿಗೆ ತಾಗಿ ಹುಟ್ಟಿದ್ದು ಭೀತಿ, ಮಾತು ಅರಿದಾತನಿಗೆ ಮಾನ ಮಯರ್ಾದೆ, ಮಾತನರಿಯದ ಮನಕೆ ನಾನಾ ತಗಾದೆ. ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದು ವಚನ ಮೂಲರ್ೊಕ ಜಯಿಸುವುದು ತಿಳಿಯಾ, ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ, ಮೂರು ಗಳಿಗೆಯ ಬಾಳು ಘಮ ಘಮಿಸುತಿರಲಿ ಎಂದು ಕವಿ ದಿನಕರ ದೇಸಾಯಿಯವರು ಹೇಳುತ್ತಾರೆ.
ಆತ್ಮ ಸಂಸ್ಕಾರದ ಒಂದು ರೂಪವಾದ ಮಾತನಾಡುವ ಕಲೆಯು ಮಗು ಪ್ರಪಂಚಕ್ಕೆ ಬಂದಂದಿನಿಂದಲೂ ತನ್ನ ಜೀವನದ ಕೊನೆಯವರೆಗೂ ಅವಿರತವಾಗಿ ಸಾಗುವ ಒಂದು ಸಚೇತನ ಕ್ರಿಯೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ಪವಿತ್ರ ಶೆಟ್ಟಿ
ಪ್ರಥಮ ಎಂ.ಎ. ಕನ್ನಡ
Subscribe to:
Posts (Atom)
ಬಿತ್ತಿ ವಿಶೇಷಾಂಕ 2017
-
2014-15ನೇಯ ಸಾಲಿನ "ಬಿತ್ತಿ" ಸಾಪ್ತಾಹಿಕ ಪತ್ರಿಕೆಯ ಸಂಪಾದಕ ಮಂಡಳಿ ಗೌರವ ಸಂಪಾದಕರು - ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷರು ಎಸ್.ವಿ .ಪಿ.ಕ...
-
“ಬಿತ್ತಿ” ಎಂಬ ಹೆಸರಿನ ಸಾಪ್ತಾಹಿಕ ಸಾಹಿತ್ಯಿಕ ಪತ್ರಿಕೆಯು 1-1-1991ರಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಮೂಲಕ ಆರಂಭವಾಗಿದ್ದು...





